Tuesday, April 3, 2012

ಮುನ್ನುಡಿ

ಆರೋಗ್ಯ, ಯಾರಿಗೆ ಬೇಡ? ಅದರಲ್ಲೂ ಉತ್ತಮ ಆರೋಗ್ಯ! ಅದಕ್ಕಾಗಿ ಈ ಒಂದು ಪ್ರಯತ್ನ, ಎಲ್ಲರಿಗಾಗಿ, ಎಲ್ಲರ ಒಳಿತಿಗಾಗಿ.
ಉತ್ತಮ ಆರೋಗ್ಯ ಎಂದರೆ ಏನು? ಖಾಯಿಲೆಗಳಿಲ್ಲದಿರುವುದು ಅಷ್ಟೆಯೇ? ಅದು ಆರೋಗ್ಯದ ಒಂದು ಭಾಗವಷ್ಟೇ. ಆಯುರ್ವೇದದಲ್ಲಿ “ದೋಷ, ಅಗ್ನಿ, ಧಾತು, ಮಲ ಮತ್ತು ಎಲ್ಲ ಕ್ರಿಯೆಗಳ ಸಾಮ್ಯತೆಯೊಡನೆ ಪ್ರಸನ್ನವಾದ ಆತ್ಮಾ, ಇಂದ್ರಿಯಗಳು ಮತ್ತು ಮನಸ್ಸು ಇದ್ದರೆ ಅದನ್ನು ಸ್ವಾಸ್ಥ್ಯ” ಎಂದು ವಿವರಿಸಿದ್ದಾರೆ. ಇಲ್ಲಿ ಹೇಳಿದ ಪ್ರತಿಯೊಂದು ಅಂಶಗಳನ್ನೂ ಮುಂದಿನ ದಿನಗಳಲ್ಲಿ ವಿವರಿಸುತ್ತೇನೆ. ಏಕೆಂದರೆ ಇವುಗಳು ತುಂಬಾ ವಿಸ್ತಾರವಿರುವ ಮತ್ತು ಗಹನವಾದ ವಿಚಾರಗಳು.
ಆದರೂ ಸದ್ಯಕ್ಕೆ ಸುಲಭವಾಗಿ ಅರ್ಥವಾಗಲು ಹೇಳುವುದಾದರೆ “ಎಲ್ಲಾ ಶಾರೀರಿಕ ಮತ್ತು ಮಾನಸಿಕ ಕ್ರಿಯೆಗಳು ಸರಿಯಾಗಿ, ಕಾಲಕಾಲಕ್ಕೆ ಆಗುತ್ತಿದ್ದು, ಮನಸ್ಸು ಉಲ್ಲಸಿತವಾಗಿದ್ದು, ವಿವೇಚನೆ-ಬುದ್ಧಿಗಳು ಸರಿಯಾಗಿ ವರ್ತಿಸುತ್ತಿದ್ದರೆ ಅದು ಉತ್ತಮ ಆರೋಗ್ಯ” ಎನ್ನಬಹುದು. ಇಲ್ಲಿ ದೈಹಿಕ, ಮಾನಸಿಕ, ಆಧ್ಯಾತ್ಮಿಕ (ತನ್ನ ಬಗೆಗಿನ ಅರಿವು) ಹಾಗೂ ಸಾಮಾಜಿಕ (ತನ್ನ ಸುತ್ತಲಿನ ಪರಿವೆ ಹಾಗೂ ಅದಕ್ಕೆ ತಕ್ಕ ವರ್ತನೆ) ಆರೋಗ್ಯವೂ ಒಟ್ಟಾಗಿ ಹೇಳಲ್ಪಟ್ಟಿವೆ. ಹಾಗಾಗಿಯೇ ಆಯುರ್ವೇದವನ್ನು ’ಪರಿಪೂರ್ಣ ಚಿಕಿತ್ಸಾ ವಿಧಾನ’ ಎನ್ನಲಾಗಿದೆ.
ಮುಂದಿನ ಬರಹಗಳಲ್ಲಿ ಆಯುರ್ವೇದದಲ್ಲಿ ಹೇಳಿದ ಒಂದೊಂದೇ ವಿಚಾರಗಳನ್ನೂ ನನಗೆ ತಿಳಿದಷ್ಟು ವಿವರಿಸಲು ಪ್ರಯತ್ನಿಸುತ್ತೇನೆ. ನಿಮ್ಮ ಸಹಕಾರ, ಪ್ರೋತ್ಸಾಹ, ಸಲಹೆಗಳು ಇದನ್ನು ಇನ್ನೂ ಉತ್ತಮ ಪಡಿಸಲು ಸಹಾಯ ಮಾಡುತ್ತವೆ. ಅವನ್ನು ನಿಮ್ಮಿಂದ ಬಯಸಬಹುದಲ್ಲವೇ?

1 comment:

  1. ಎಲ್ಲಾ ಶಾರೀರಿಕ ಮತ್ತು ಮಾನಸಿಕ ಕ್ರಿಯೆಗಳನ್ನು ಅರ್ಥವತ್ತಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು.

    ReplyDelete