Friday, November 18, 2011

ಬಾಯಿಯ ದುರ್ಗಂಧ ಹೋಗಲಾಡಿಸುವ ಆಹಾರಗಳು

ಬಾಯಿಯ ಕೆಟ್ಟ ವಾಸನೆ ಮನುಷ್ಯನ ಆತ್ಮವಿಶ್ವಾಸವನ್ನೇ ಕುಂದಿಸುತ್ತೆ. ಹಲ್ಲಿನ ಸ್ವಾಸ್ಥ್ಯದೆಡೆಗಿನ ನಿರ್ಲಕ್ಷ್ಯ ಮತ್ತು ಜೀರ್ಣಕ್ರಿಯೆ ಸಮಸ್ಯೆ ಬಾಯಿಯ ದುರ್ವಾಸನೆ ತರುತ್ತದೆ. ಕೇವಲ ಹಲ್ಲುಜ್ಜುವ ಮೂಲಕ ಬಾಯಿಯನ್ನು ಶುದ್ಧವಾಗಿಟ್ಟುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನೈಸರ್ಗಿಕವಾಗಿ ಬಾಯಿಯ ದುರ್ನಾತ ಹೋಗಿಸುವ ಕೆಲವು ಆಹಾರಗಳು ಇಲ್ಲಿವೆ.
ಬಾಯಿಯ ದುರ್ಗಂಧ ಹೋಗಲಾಡಿಸುವ ಆಹಾರಗಳು:

* ವಿಟಮಿನ್ ಸಿ:
ಸಿಟ್ರಸ್ ಹಣ್ಣುಗಳ ಸೇವನೆ ಬಾಯಿಯ ಆರೋಗ್ಯವನ್ನು ಕಾಪಾಡುತ್ತದೆ. ಈ ಹಣ್ಣುಗಳು ಬಾಯಿ ಮತ್ತು ಹಲ್ಲಿನಲ್ಲಿನ ಬ್ಯಾಕ್ಟೀರಿಯಾ ಕಡಿಮೆಮಾಡುತ್ತದೆ. ಇದರಿಂದ ವಸಡುಗಳಲ್ಲಿನ ಸಮಸ್ಯೆಯನ್ನೂ ತಡೆಯಬಹುದು. ಸ್ಟ್ರಾಬೆರಿ, ದ್ರಾಕ್ಷಿ, ನಿಂಬೆ, ಕಿತ್ತಳೆ ಈ ಹಣ್ಣುಗಳು ಮತ್ತು ಸೇಬು, ಕ್ಯಾರೆಟ್ ಇವುಗಳನ್ನೂ ಅಗಿದು ತಿಂದರೆ ಹಲ್ಲುಗಳು ಶುದ್ಧಗೊಳ್ಳುವುದಲ್ಲದೆ ದುರ್ವಾಸನೆಯೂ ಹೋಗುತ್ತದೆ.* ನಿಂಬೆಹಣ್ಣು: ಊಟವಾದ ನಂತರ ನಿಂಬೆಹುಳಿ ಅಥವಾ ನಿಂಬೆಸಿಪ್ಪೆಯನ್ನು ಒಮ್ಮೆ ಉಜ್ಜಿಕೊಂಡರೆ ಹಲ್ಲುಗಳೂ ಚೆನ್ನಾಗಿರುತ್ತೆ, ದುರ್ವಾಸನೆಯೂ ಇರುವುದಿಲ್ಲ. ನಿಂಬೆ ಬಾಯಿಯಲ್ಲಿನ ಬ್ಯಾಕ್ಟೀರಿಯಾ ತೊಲಗಿಸುವುದಲ್ಲದೆ ಈರುಳ್ಳಿ, ಶುಂಠಿ ಬೆಳ್ಳುಳ್ಳಿಯ ವಾಸನೆಯನ್ನೂ ಬಾಯಿಯಿಂದ ಹೋಗಿಸುತ್ತದೆ.


* ಏಲಕ್ಕಿ, ಸೋಂಪು: ಏಲಕ್ಕಿ, ಲವಂಗ ಮತ್ತು ಸೋಂಪು ಕಾಳು ನೈಸರ್ಗಿಕವಾಗಿ ಬಾಯಿಯಿಂದ ದುರ್ಗಂಧವನ್ನು ಹೋಗಿಸುತ್ತದೆ. ಇದು ಬಾಯಿಯನ್ನು ರಿಫ್ರೆಷ್ ಮಾಡುತ್ತದೆ.


* ಸೀಬೆ ಎಲೆ: ಸೀಬೆ ಗಿಡದ ಎಲೆಯನ್ನು ಅಗಿದರೆ ಹಲ್ಲುಗಳು ಬೆಳ್ಳಗಾಗುತ್ತವೆ ಎನ್ನಲಾಗಿದೆ. ಇದು ಬಾಯಿ ದುರ್ಗಂಧವನ್ನೂ ತಡೆಯುತ್ತದೆ. ಕೊತ್ತಂಬರಿ ಮತ್ತು ಪುದೀನಾ ಎಲೆಯನ್ನೂ ಅಗಿಯಬಹುದು.


* ಮೊಸರು: ಸಂಶೋಧಕರ ಪ್ರಕಾರ, ಮೊಸರಿನ ಸೇವನೆಯಿಂದ ಬಾಯಿಯಲ್ಲಿ ದುರ್ವಾಸನೆಗೆ ಕಾರಣವಾಗುವ ಸಲ್ಫೈಟ್ ಕಡಿಮೆ ಮಾಡಬಹುದು. ಇದು ಬ್ಯಾಕ್ಟೀರಿಯಾವನ್ನು ತೊಲಗಿಸುವುದರಿಂದ ಕಡಿಮೆ ಕೊಬ್ಬಿನಂಶ, ಸಕ್ಕರೆರಹಿತ ಮೊಸರಿಸ ಸೇವನೆ ತುಂಬಾ ಒಳ್ಳೆಯದು. ಆದರೆ ಸಕ್ಕರೆ ಬೆರೆಸಿ ತಿಂದರೆ ಬಾಯಿಯಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ ಇನ್ನಷ್ಟು ಹೆಚ್ಚುತ್ತದೆ.

ಸೀಬೆ

ಸೀಬೆ ಚಿರಪರಿಚಿತ ಹಣ್ಣು. ಆದರೆ ಅದ್ಭುತ ರುಚಿ ನೀಡುವ ಈ ಹಣ್ಣಿನಲ್ಲಿನ ಹಲವು ಉಪಯೋಗ ಎಲ್ಲರಿಗೂ ಪರಿಚಿತವಲ್ಲ. ಕಡಿಮೆ ಬೆಲೆಗೆ ಸಿಗುವ ಈ ಹಣ್ಣಿನಲ್ಲಿ ನಿಮ್ಮ ಆರೋಗ್ಯವನ್ನು ಉಳಿಸುವ ಅನೇಕ ಅಂಶ ತುಂಬಿಕೊಂಡಿದೆ. ಅದೇನೆಂದು ಮುಂದೆ ನೋಡಿ.


ವಯಸ್ಸಿಗೆ ಸಂಬಂಧಿಸಿದ ಸಮಸ್ಯೆ: ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಾದ ಮರೆವು, ಮಂದ ದೃಷ್ಟಿ ಮತ್ತು ಸಂಧಿವಾತವನ್ನೂ ನಿವಾರಿಸುವಲ್ಲಿ ಸೀಬೆ ಹಣ್ಣು ಸಹಕಾರಿ.


ಕೊಲೆಸ್ಟ್ರಾಲ್ ನಿಯಂತ್ರಣ: ತೂಕ ಕಡಿಮೆಮಾಡಿಕೊಳ್ಳಬೇಕೆಂದಿದ್ದರೆ ಸೀಬೆ ಒಳ್ಳೆ ಆಯ್ಕೆ. ಸೀಬೆಯಲ್ಲಿ ಅವಶ್ಯಕ ಕಾರ್ಬೊ ಹೈಡ್ರೇಡ್ ಮತ್ತು ಫೈಬರ್ ಇರುವುದರಿಂದ ಬೊಜ್ಜನ್ನೂ ನಿಯಂತ್ರಿಸುತ್ತದೆ. ಸೀಬೆ ಹಣ್ಣನ್ನು ನಿಮ್ಮ ಡಯಟ್ ನಲ್ಲಿರಿಸಿಕೊಂಡರೆ ಕೊಲೆಸ್ಟ್ರಾಲ್ ನಿಯಂತ್ರಣ ಸಾಧ್ಯವಿದೆ.


ಸೀಬೆಯಲ್ಲಿ ಕೊಬ್ಬಿನಂಶ ಕೇವಲ 0.9 ಇದ್ದು, 84 ಕ್ಯಾಲೊರಿ ಮಾತ್ರ ಇರುತ್ತದೆ. ಆಪಲ್ ಹೋಲಿಸಿದರೆ ಸೀಬೆಯಲ್ಲಿ ಶೇ 42 ರಷ್ಟು ಕಡಿಮೆ ಕ್ಯಾಲೊರಿ ಮತ್ತು ಶೇ 38 ರಷ್ಟು ಕಡಿಮೆ ಕೊಬ್ಬಿನಾಂಶವಿದೆ.


ಹೇರಳ ವಿಟಮಿನ್ ಸಿ: ವಿಟಮಿನ್ ಸಿ ಇರುವ ಉತ್ತಮ ಹಣ್ಣನ್ನು ಹುಡುಕುತ್ತಿದ್ದರೆ ಸೀಬೆಹಣ್ಣು ತುಂಬಾ ಒಳ್ಳೆಯ ಆಯ್ಕೆ. ಕಿತ್ತಳೆಯಲ್ಲಿ 69 ಮಿ.ಗ್ರಾಂ ವಿಟಮಿನ್ ಸಿ ಇದ್ದರೆ ಸೀಬೆಯಲ್ಲಿ 165 ಮಿ.ಗ್ರಾಂ ವಿಟಮಿನ್ ಸಿ ಇದೆ ಎಂದು ತಿಳಿದುಬಂದಿದೆ.


ಮಧುಮೇಹಿಗಳಿಗೆ ಉಪಯೋಗ: ರಕ್ತದಲ್ಲಿನ ಸಕ್ಕರೆ ಅಂಶ ಮತ್ತು ಕೊಲೆಸ್ಟ್ರಾಲ್ ನಿಯಂತ್ರಿಸುವ ಗುಣ ಸೀಬೆಯಲ್ಲಿದೆ. ಇದು ಹೃದಯದ ಸ್ವಾಸ್ಥ್ಯವನ್ನೂ ಕಾಪಾಡುತ್ತದೆ. ಸೀಬೆಯಲ್ಲಿ ಬೆಟಾ ಕೆರಾಟಿನ್, ಪೊಟಾಶಿಯಂ ಮತ್ತು ಫೈಬರ್ ಅಂಶ ಹೆಚ್ಚಿರುವುದರಿಂದ ಹೆಚ್ಚು ಉಪಯೋಗ.


ಚರ್ಮದ ಪೋಷಣೆ: ಸೀಬೆ ಸೇವನೆ ಚರ್ಮವನ್ನೂ ಹದವಾಗಿಡುತ್ತದೆ. ಅನೇಕ ತ್ವಚೆ ಸಂಬಂಧಿ ಸಮಸ್ಯೆಗಳನ್ನು ದೂರವಿರಿಸುತ್ತದೆ. ದಿನಕ್ಕೊಂದು ಸೀಬೆ ತಿಂದರೆ ಸಾಕು, ಅಗತ್ಯವಾದ ಕಬ್ಬಿಣಾಂಶ, ಫೋಲಿಕ್ ಆಸಿಡ್, ಕ್ಯಾಲ್ಸಿಯಂ, ಫೈಬರ್, ಪ್ರೊಟೀನ್, ಕಾರ್ಬೊಹೈಡ್ರೇಡ್, ವಿಟಮಿನ್ ಎ, ಬಿ, ಮತ್ತು ಸಿ ಎಲ್ಲವನ್ನೂ ನೀಡುತ್ತದೆ.


ಮಲಬದ್ಧತೆ: ಸೀಬೆ ಹಣ್ಣಿನಲ್ಲಿ ಅಧಿಕವಾಗಿರುವ ನಾರಿನಂಶವಿರುವುದರಿಂದ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದವರು ಸೀಬೆ ಸೇವಿಸಿದರೆ ತುಂಬಾ ಉಪಯೋಗ ಪಡೆಯಬಹುದು.


ಪುರುಷರಿಗೆ ಅಗತ್ಯ: ವೀರ್ಯೋತ್ಪತ್ತಿ ಕಡಿಮೆಯಿದ್ದ ಪುರುಷರು ಸೀಬೆಹಣ್ಣನ್ನು ಸೇವಿಸುವುದರಿಂದ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎನ್ನಲಾಗಿದೆ.

ಬೇವು

ಬೇವಿನ ಸೊಪ್ಪಿನಲ್ಲಿ ಆರೋಗ್ಯಕ್ಕೆ ಅಗತ್ಯವಿರುವ ಅನೇಕ ಔಷಧೀಯ ಗುಣಗಳಿವೆ. ಬೇವು ದೇಹವನ್ನು ಮಾತ್ರವಲ್ಲ ತ್ವಚೆ ಮತ್ತು ಕೂದಲನ್ನೂ ಆರೋಗ್ಯಕರವಾಗಿಡುತ್ತದೆ. ಇದರಲ್ಲಿರುವ ಕಹಿ ಅಂಶ ಎಲ್ಲರೂ ಇದರಿಂದ ದೂರ ಉಳಿಯುವಂತೆ ಮಾಡಿದೆ.

ಆದರೆ ಬೇವಿನಲ್ಲಿರುವ ಉಪಯೋಗ ಮತ್ತು ಅದನ್ನು ಕುಡಿಯುವ ರೀತಿ ತಿಳಿದುಕೊಂಡರೆ ಬೇವಿನಿಂದ ನಿಮ್ಮ ಆರೋಗ್ಯವನ್ನೂ ಸುಧಾರಿಸಿಕೊಳ್ಳಬಹುದು.

1. ಮೊಡವೆ, ಗುಳ್ಳೆ: ಬೇವಿನಲ್ಲಿ ಉರಿನಿವಾರಕ ಅಂಶವಿರುವುದರಿಂದ ಮೊಡವೆ ಗುಳ್ಳೆಗಳಿಗೆ ತುಂಬಾ ಪರಿಣಾಮಕಾರಿ. ಅಷ್ಟೇ ಅಲ್ಲದೆ ತ್ವಚೆಯ ಹೊಳಪನ್ನೂ ಇದು ಹೆಚ್ಚಿಸುತ್ತದೆ.

2. ವಿಷಕಾರಿ ಅಂಶದ ನಿರ್ಮೂಲನೆ:
ಬೇವಿನ ರಸ ಕುಡಿಯುವುದರಿಂದ ದೇಹದಲ್ಲಿನ ವಿಷಕಾರಿ ಅಂಶಗಳು ತೊಲಗಿ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತೆ ಮತ್ತು ಕೂದಲಿನ ಬೆಳವಣಿಗೆಗೆಗೂ ಸಹಕಾರಿ.

3. ಮಧುಮೇಹ: ಮಧುಮೇಹಿಗಳಿಗೆ ಬೇವಿನ ರಸ ತುಂಬಾ ಪರಿಣಾಮಕಾರಿ ಎನ್ನಲಾಗಿದೆ. ದಿನವೂ ಬೇವಿನ ರಸ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಗೊಳ್ಳುತ್ತದೆ.

4. ತೀಕ್ಷ್ಣ ದೃಷ್ಟಿ:
ಬೇವಿನ ಜ್ಯೂಸ್ ಸೇವನೆಯಿಂದ ಕಣ್ಣಿನ ದೃಷ್ಟಿ ಹೆಚ್ಚುತ್ತದೆ ಮತ್ತು ಕಣ್ಣಿನ ಆರೋಗ್ಯ ಸ್ವಾಸ್ಥವಾಗಿರುವಂತೆ ನೋಡಿಕೊಳ್ಳುತ್ತದೆ.

5. ಸಿಡುಬಿನ ಕಲೆ: ಬೇವಿನರಸವನ್ನು ಚರ್ಮದ ಮೇಲೆ ಮಸಾಜ್ ಮಾಡುವುದರಿಂದ ಸಿಡುಬಿನ ಕಲೆಯನ್ನು ಬೇಗನೆ ಹೋಗಿಸುತ್ತದೆ.

6. ಮಲೇರಿಯಾ: ಬೇವು ಮಲೇರಿಯಾದಂತಹ ಖಾಯಿಲೆಯನ್ನೂ ನಿವಾರಿಸಲು ಸಹಕಾರಿ. ಬೇವಿನ ರಸ ದೇಹದಲ್ಲಿ ವೈರಸ್ ಬೆಳವಣಿಗೆಯನ್ನು ತಗ್ಗಿಸಿ ಲಿವರ್ ಚೆನ್ನಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ.

7. ಗರ್ಭಾವಸ್ಥೆ ಸಮಸ್ಯೆ: ಗರ್ಭಾವಸ್ಥೆಯಲ್ಲಿ ಜನನೇಂದ್ರಿಯದಲ್ಲಿ ಕಾಣಿಸಿಕೊಳ್ಳುವ ನೋವನ್ನೂ ಬೇವು ತಡೆಯುತ್ತದೆ. ಅನೇಕ ಗರ್ಭಿಣಿಯರು ಬೇವಿನ ರಸವನ್ನು ಮಸಾಜ್ ಮಾಡಿಕೊಳ್ಳುತ್ತಾರೆ.

ಬಾಳೆಹಣ್ಣು

ಬಾಳೆಹಣ್ಣು ತಿಂದರೆ ದಪ್ಪಗಾಗ್ತಾರೆ ಎಂಬ ಮಾತಿದೆ. ಆದರೆ ಇದು ನಿಜಾನಾ? ಬಾಳೆಹಣ್ಣು ನಿಜಕ್ಕೂ ದೇಹದ ತೂಕ ಹೆಚ್ಚಿಸುತ್ತಾ? ತೂಕ ಇಳಿಸುವ ಆಹಾರದಲ್ಲಿ ಏಕೆ ಬಾಳೆಹಣ್ಣನ್ನು ಹೊರಗಿಡಲಾಗುತ್ತೆ? ಇದೆಲ್ಲದಕ್ಕೂ ಉತ್ತರ ಮುಂದೆ ಇದೆ ನೋಡಿ.
ಬಾಳೆಹಣ್ಣಿನ ಸೇವನೆ ತುಂಬಾ ಆರೋಗ್ಯಕರ. ಇದು ಎದೆ ಉರಿ, ಸುಸ್ತು, ಮಲಬದ್ಧತೆ, ರಕ್ತದೊತ್ತಡ ವನ್ನು ತಡೆಯುವುದಷ್ಟೇ ಅಲ್ಲ, ತಕ್ಷಣವೇ ದೇಹಕ್ಕೆ ಶಕ್ತಿ ನೀಡಿ, ಒತ್ತಡ ನಿವಾರಿಸುವ ವಿಶೇಷ ಗುಣ ಬಾಳೆಹಣ್ಣಿನಲ್ಲಿದೆ. ಆದರೆ ಅನೇಕ ಪೋಷಕಾಂಶಗಳಿರುವ ಬಾಳೆಹಣ್ಣು ಬೊಜ್ಜನ್ನು ಹೇಗೆ ತರುತ್ತದೆ?


ದಿನವೂ ಎರಡಕ್ಕಿಂತ ಹೆಚ್ಚು ಬಾಳೆಹಣ್ಣು ತಿಂದರೆ ದಪ್ಪಗಾಗಬಹುದು. ಆದರೆ ಆಗಾಗ್ಗೆ ಸೇವಿಸುವುದರಿಂದ ತೂಕ ಹೆಚ್ಚುವುದಿಲ್ಲ. ನೀವು ಫಿಟ್ ಆಗಿರಬೇಕೆಂದರೆ ದಿನಕ್ಕೆ ಒಂದು ಬಾಳೆಹಣ್ಣು ತಿನ್ನಬಹುದು. ಆದರೆ 2ಕ್ಕಿಂತ ಹೆಚ್ಚು ತಿಂದರೆ ಗ್ಲೈಸೊಜೆನ್ ಎಂಬ ಅಂಶ ಹೆಚ್ಚಾಗಿ ಬೊಜ್ಜಿನ ರೂಪದಲ್ಲಿ ಉಳಿದುಕೊಳ್ಳುತ್ತದೆ.


ಬಾಳೆಹಣ್ಣಿನಲ್ಲಿ ಕೊಬ್ಬಿನಂಶ ಕಡಿಮೆಯಿದೆ. ಆದರೆ ಸಕ್ಕರೆ ಅಂಶ ತುಂಬಾ ಹೆಚ್ಚಿದೆ. ಸಾಧಾರಣ ಬಾಳೆಹಣ್ಣಿನಲ್ಲಿ ಶೇ. 75 ರಷ್ಟು ಕ್ಯಾಲೊರಿ ಇರುತ್ತದೆ. ಸಕ್ಕರೆ ಅಂಶ ಮತ್ತು ಕ್ಯಾಲೊರಿ ಎರಡೂ ಕೂಡ ದೇಹವನ್ನು ದಪ್ಪಗಾಗುವಂತೆ ಮಾಡುತ್ತೆ. ಆದ್ದರಿಂದ ಇದನ್ನು ಬೆಳಗ್ಗೆ ಹೊತ್ತು ಸೇವಿಸಿದರೆ ದೇಹಕ್ಕೆ ಶಕ್ತಿ ಒದಗುತ್ತದೆ ಮತ್ತು ಕರಗಿಸಲು ಸುಲಭವೆನಿಸುತ್ತದೆ.


ವ್ಯಾಯಾಮ ಮಾಡದಿದ್ದರೆ ಖಂಡಿತ ಬಾಳೆಹಣ್ಣಿನ ಸೇವನೆ ದೇಹವನ್ನು ದಪ್ಪ ಮಾಡುತ್ತದೆ. ಆದ್ದರಿಂದ ಬಾಳೆಹಣ್ಣು ತಿನ್ನಬೇಕೆಂದರೆ ಅದನ್ನು ಕರಗಿಸಲು 15 ನಿಮಿಷ ವಾಕಿಂಗ್ ಮಾಡಲೇಬೇಕು. ಅದರಲ್ಲೂ ಮಧುಮೇಹಿಗಳು ಬಾಳೆಹಣ್ಣಿನ ಸೇವನೆಯನ್ನು ಮಾಡಬಾರದು.


ಬಾಳೆಹಣ್ಣು ದೇಹಕ್ಕೆ ಒಳಿತು. ಆದರೆ ನಿಯಮಿತವಾದ ಸೇವನೆ ಉತ್ತಮ. ಬಾಳೆ ಹಣ್ಣು ತಿನ್ನಲೇಬೇಕೆಂದಿದ್ದ ಪಕ್ಷದಲ್ಲಿ ವ್ಯಾಯಾಮ ಮಾಡಿ, ಕಡಿಮೆ ತಿನ್ನಿ.

ಮೊಸರು

 
ಮೊಸರಿನಲ್ಲಿ ಅನೇಕ ಪೋಷಕಾಂಶ ಮತ್ತು ಆರೋಗ್ಯಕ್ಕೆ ಅಗತ್ಯವಿರುವ ಅಂಶವಿದೆ. ಕೇವಲ ಆರೋಗ್ಯಕ್ಕೆ ಮಾತ್ರವಲ್ಲ, ಮೊಸರನ್ನು ಸೌಂದರ್ಯ ವೃದ್ಧಿಗೂ ಬಳಸಲಾಗುತ್ತೆ.

ಆಯುರ್ವೇದದ ಪ್ರಕಾರ ರಾತ್ರಿಹೊತ್ತು ಮೊಸರು ಸೇವಿಸಬಾರದು ಎಂಬ ಮಾತಿದೆ. ಮೊಸರನ್ನು ತಾಜಾ ಇದ್ದಾಗಲೇ ಸೇವಿಸಿದರೆ ಮೊಸರಿನ ಸಂಪೂರ್ಣ ಉಪಯೋಗವನ್ನು ಪಡೆಯಬಹುದು. ಅದು ಯಾವುದು ಎಂದು ಮುಂದೆ ತಿಳಿಯಿರಿ.


ಮೊಸರಿನಿಂದ ಏನೇನು ಉಪಯೋಗ ಎಂದು ತಿಳಿಯಿರಿ.

1. ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.
2. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
3. ಬೇರೆ ಆಹಾರಗಳಲ್ಲಿರುವ ಮಿನರಲ್ ಮತ್ತು ಪೋಷಕಾಂಶವನ್ನು ಬೇಗನೆ ಹೀರಿಕೊಳ್ಳಲು ಮೊಸರು ಸೇವನೆ ಅಗತ್ಯ.
4. ಲ್ಯಾಕ್ಟೋಸ್ ಅಲರ್ಜಿ ಇದ್ದವರಿಗೆ ಇದು ತುಂಬಾ ಸಹಕಾರಿ.
5. ಎಲುಬು ಮತ್ತು ಹಲ್ಲುಗಳನ್ನು ಗಟ್ಟಿಯಾಗಿಸಲು ಮೊಸರಿನ ಸೇವನೆ ಅತಿ ಮುಖ್ಯ. ಸಂಧಿವಾತದ ವಿರುದ್ಧ ಹೋರಾಡಲು ಸಹಕಾರಿ.
6. ರಕ್ತದೊತ್ತಡದ ತೊಂದರೆಯನ್ನು ಕಡಿಮೆ ಮಾಡುತ್ತದೆ.