Tuesday, April 3, 2012

ಉತ್ತಮ ಆರೋಗ್ಯಕ್ಕಾಗಿ ಆಯುರ್ವೇದ ತಾಣ

ayurveda
ಒಂದು ಕಡೆ ಆಯುರ್ವೇದವೆಂದರೆ ಬರಿಯ ಗಿಡಮೂಲಿಕೆಯ ಪುಡಿವೈದ್ಯ ಅಥವಾ ಬರಿಯ ಮಾಲೀಶ್ (massage) ಚಿಕಿತ್ಸೆ ಎಂದೆಲ್ಲ ತಪ್ಪು ಕಲ್ಪನೆಗಳಿದ್ದರೆ ಇನ್ನೊಂದು ಕಡೆ ಆಯುರ್ವೇದದ ಬಗ್ಗೆ ನಿಜವಾದ ಆಸಕ್ತಿ, ಕುತೂಹಲ, ಅರಿವು ಉಂಟಾಗುತ್ತಿದೆ. ಇಂತಹ ಪರ್ವಕಾಲದಲ್ಲಿ ಕನ್ನಡಿಗರಿಗೆ ಆಯುರ್ವೇದದ ಪರಿಚಯ ಹಾಗೂ ತಿಳುವಳಿಕೆ ನೀಡುವ ಉದ್ದೇಶದಿಂದ ಈ ತಾಣವನ್ನು ಆರಂಭಿಸಿದ್ದೇನೆ.
ಆಯುಷ್ಕಾಮೀಯವೆಂಬುದು ಆಚಾರ್ಯ ವಾಗ್ಭಟರ ಆಯುರ್ವೇದ ಗ್ರಂಥದ ಮೊದಲ ಅಧ್ಯಾಯದ ಹೆಸರು. ಉತ್ತಮ ಆರೋಗ್ಯದಿಂದ ಕೂಡಿದ ಪರಿಪೂರ್ಣ ಮತ್ತು ದೀರ್ಘ (?) “ಆಯುಸ್ಸನ್ನು ಬಯಸುವವರಿಗಾಗಿ” ಎಂಬುದು ಇದರ ಅರ್ಥ.
ಕಾಲಕಾಲಕ್ಕೆ ಆಯುರ್ವೇದ ವಿಚಾರಗಳನ್ನು ಲೇಖನ, ಚಿತ್ರ, ದೃಶ್ಯಾವಳಿಗಳು ಮುಂತಾದವುಗಳಿಂದ ಪ್ರಸ್ತುತಪಡಿಸಲಿದ್ದೇನೆ.
ಸ್ನೇಹಿತರೇ, ಬನ್ನಿ, ಬರುತ್ತಿರಿ.
ಧನ್ಯವಾದಗಳು

ಮುನ್ನುಡಿ

ಆರೋಗ್ಯ, ಯಾರಿಗೆ ಬೇಡ? ಅದರಲ್ಲೂ ಉತ್ತಮ ಆರೋಗ್ಯ! ಅದಕ್ಕಾಗಿ ಈ ಒಂದು ಪ್ರಯತ್ನ, ಎಲ್ಲರಿಗಾಗಿ, ಎಲ್ಲರ ಒಳಿತಿಗಾಗಿ.
ಉತ್ತಮ ಆರೋಗ್ಯ ಎಂದರೆ ಏನು? ಖಾಯಿಲೆಗಳಿಲ್ಲದಿರುವುದು ಅಷ್ಟೆಯೇ? ಅದು ಆರೋಗ್ಯದ ಒಂದು ಭಾಗವಷ್ಟೇ. ಆಯುರ್ವೇದದಲ್ಲಿ “ದೋಷ, ಅಗ್ನಿ, ಧಾತು, ಮಲ ಮತ್ತು ಎಲ್ಲ ಕ್ರಿಯೆಗಳ ಸಾಮ್ಯತೆಯೊಡನೆ ಪ್ರಸನ್ನವಾದ ಆತ್ಮಾ, ಇಂದ್ರಿಯಗಳು ಮತ್ತು ಮನಸ್ಸು ಇದ್ದರೆ ಅದನ್ನು ಸ್ವಾಸ್ಥ್ಯ” ಎಂದು ವಿವರಿಸಿದ್ದಾರೆ. ಇಲ್ಲಿ ಹೇಳಿದ ಪ್ರತಿಯೊಂದು ಅಂಶಗಳನ್ನೂ ಮುಂದಿನ ದಿನಗಳಲ್ಲಿ ವಿವರಿಸುತ್ತೇನೆ. ಏಕೆಂದರೆ ಇವುಗಳು ತುಂಬಾ ವಿಸ್ತಾರವಿರುವ ಮತ್ತು ಗಹನವಾದ ವಿಚಾರಗಳು.
ಆದರೂ ಸದ್ಯಕ್ಕೆ ಸುಲಭವಾಗಿ ಅರ್ಥವಾಗಲು ಹೇಳುವುದಾದರೆ “ಎಲ್ಲಾ ಶಾರೀರಿಕ ಮತ್ತು ಮಾನಸಿಕ ಕ್ರಿಯೆಗಳು ಸರಿಯಾಗಿ, ಕಾಲಕಾಲಕ್ಕೆ ಆಗುತ್ತಿದ್ದು, ಮನಸ್ಸು ಉಲ್ಲಸಿತವಾಗಿದ್ದು, ವಿವೇಚನೆ-ಬುದ್ಧಿಗಳು ಸರಿಯಾಗಿ ವರ್ತಿಸುತ್ತಿದ್ದರೆ ಅದು ಉತ್ತಮ ಆರೋಗ್ಯ” ಎನ್ನಬಹುದು. ಇಲ್ಲಿ ದೈಹಿಕ, ಮಾನಸಿಕ, ಆಧ್ಯಾತ್ಮಿಕ (ತನ್ನ ಬಗೆಗಿನ ಅರಿವು) ಹಾಗೂ ಸಾಮಾಜಿಕ (ತನ್ನ ಸುತ್ತಲಿನ ಪರಿವೆ ಹಾಗೂ ಅದಕ್ಕೆ ತಕ್ಕ ವರ್ತನೆ) ಆರೋಗ್ಯವೂ ಒಟ್ಟಾಗಿ ಹೇಳಲ್ಪಟ್ಟಿವೆ. ಹಾಗಾಗಿಯೇ ಆಯುರ್ವೇದವನ್ನು ’ಪರಿಪೂರ್ಣ ಚಿಕಿತ್ಸಾ ವಿಧಾನ’ ಎನ್ನಲಾಗಿದೆ.
ಮುಂದಿನ ಬರಹಗಳಲ್ಲಿ ಆಯುರ್ವೇದದಲ್ಲಿ ಹೇಳಿದ ಒಂದೊಂದೇ ವಿಚಾರಗಳನ್ನೂ ನನಗೆ ತಿಳಿದಷ್ಟು ವಿವರಿಸಲು ಪ್ರಯತ್ನಿಸುತ್ತೇನೆ. ನಿಮ್ಮ ಸಹಕಾರ, ಪ್ರೋತ್ಸಾಹ, ಸಲಹೆಗಳು ಇದನ್ನು ಇನ್ನೂ ಉತ್ತಮ ಪಡಿಸಲು ಸಹಾಯ ಮಾಡುತ್ತವೆ. ಅವನ್ನು ನಿಮ್ಮಿಂದ ಬಯಸಬಹುದಲ್ಲವೇ?

ಸೌತೆಕಾಯಿ

ಸೌತೆ ಕಾಯಿ ಸೇವನೆ ಆರೋಗ್ಯಕ್ಕೆ ಮತ್ತು ಸೌಂದರ್ಯಕ್ಕೆ ತುಂಬಾ ಒಳ್ಳೆಯದು.ಸೌತೆಕಾಯಿಂದ ಫೇಶಿಯಲ್  ಮಾಡಿ ಮುಖದಲ್ಲಿರುವ ಕಪ್ಪು ಕಲೆಯನ್ನು ಹೋಗಲಾಡಿಸಬಹುದು, ಸೌತೆಕಾಯಿ ಡಯೆಟ್ ಮಾಡಿ ತೆಳ್ಳಗಾಗಬಹುದು. ಈ ಸೌತೆಕಾಯಿ ಡಯೆಟ್ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.

ಸೌತೆಕಾಯಿಯ ಉಪಯೋಗ:


ಸೌತೆಕಾಯಿಯಲ್ಲಿ 95% ನೀರು ಮತ್ತು 5% ನಾರಿನಂಶವನ್ನು ಹೊಂದಿರುವುದರಿಂದ ಇದು ದೇಹವನ್ನು ಕ್ಲೆನ್ಸ್ ಮಾಡುತ್ತದೆ. ಇದು ದೇಹಕ್ಕೆ ನೀರಿನಂಶವನ್ನು ಪೂರೈಸುವುದರ ಜೊತೆಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ದೇಹವನ್ನು ತಂಪಾಗಿ ಇಡುವುದರ ಜೊತೆಗೆ ತ್ವಚೆಯ ಪೋಷಣೆಗೂ ಸಹಾಯ ಮಾಡುತ್ತದೆ. ಇದರ ಸೇವನೆ ಕಣ್ಣಿಗೂ ತುಂಬಾ ಒಳ್ಳೆಯದು.

ಸೌತೆಕಾಯಿ ಡಯೆಟ್ ವಿಧಾನ:

ಬೆಳಗ್ಗೆ:
ಒಂದು ಗೋಧಿಯ ಬ್ರೆಡ್ ಮತ್ತು ಜಾಮ್ , ಒಂದು ಬಟ್ಟಲು ಸೌತೆಕಾಯಿ ಸಲಾಡ್, ಒಂದು ಬಿಸಿ ಕಪ್ ಟೀ ಇದನ್ನು ಬೆಳಗ್ಗಿನ ತಿಂಡಿಯ ಬದಲು ಸೇವಿಸಬೇಕು.

ಮಧ್ಯಾಹ್ನ: ಬೇಯಿಸಿದ ಮೊಟ್ಟೆ ಅಥವಾ ಕಡಿಮೆ ಕೊಬ್ಬಿನ ಚಿಕ್ಕನ್, ಬ್ರೆಡ್ , ಮತ್ತು ಸೌತೆಕಾಯಿ ಸಲಾಡ್ ಅನ್ನು ಮಧ್ಯಾಹ್ನದ ಉಪಾಹಾರವಾಗಿ ಸೇವಿಸಬಹುದು.

ಸ್ನ್ಯಾಕ್ಸ್: ಸೇಬು, ಬಾಳೆಹಣ್ಣು, ಬೆಣ್ಣೆಹಣ್ಣಿನ ಜ್ಯೂಸ್ ಸೇವಿಸಬಹುದಾಗಿದೆ.

ರಾತ್ರಿ ಊಟ: ಬರೀ ಸಲಾಡ್ ಮಾತ್ರ ಸೇವಿಸಬೇಕು.

ಆಲೂಗೆಡ್ಡೆ

ಆಲೂಗೆಡ್ಡೆ ಹೆಚ್ಚಾಗಿ ಸೇವಿಸುವುದು ಒಳ್ಳೆಯದಲ್ಲ , ಅದು ದೇಹದಲ್ಲಿ ಬೊಜ್ಜು ಮತ್ತು ಗ್ಯಾಸ್ ಸಮಸ್ಯೆ ಹೆಚ್ಚು ಮಾಡುತ್ತೆ. ಆದರೆ ಅದನ್ನು ಸಿಪ್ಪೆ ಸಹಿತ ಬೇಯಿಸಿ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವುದು ನಿಮಗೆ ತಿಳಿದಿರಲಿ.

ಆಲೂಗೆಡ್ಡೆ ಸಿಪ್ಪೆಯನ್ನು ತೆಗೆಯದಿದ್ದರೆ ಅದರಲ್ಲಿರುವ ಮಣ್ಣು ಹೊಟ್ಟೆ ಸೇರುತ್ತದೆ ಎಂದು ಭಾವಿಸುವವರು ಗಮನಿಸಬೇಕಾದ ಅಂಶವೆಂದರೆ ಇನ್ನು ಮುಂದೆ ಸಿಪ್ಪೆ ತೆಗೆದು ಆಲೂಗೆಡ್ಡೆಯನ್ನು ತಿನ್ನುವ ಬದಲು, ಚೆನ್ನಾಗಿ ತೊಳೆದು ಸಿಪ್ಪೆ ಸಹಿತ ಬೇಹಿಸಿ ತಿನ್ನಿ. ಈ ರೀತಿ ತಿನ್ನುವುದರಿಂದ ಆಗುವ ಪ್ರಯೋಜನಗಳ ಕುರಿತು ತಿಳಿಯಲು ಮುಂದೆ ಓದಿ.

1.ಆಲೂಗೆಡ್ಡೆಯನ್ನು ಸಿಪ್ಪೆ ಸಹಿತ ಬೇಯಿಸಿ ತಿನ್ನವುದರಿಂದ ಇದರಲ್ಲಿರುವ ಅಧಿಕ ನಾರಿನಂಶ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಇದನ್ನು ಇತರ ತರಕಾರಿ ಜೊತೆ ತಿನ್ನವುದರಿಂದ ಬೇರೆ ತರಕಾರಿಗಳು ಕೂಡ ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ.

2. ಆಲೂಗೆಡ್ಡೆ ಸಿಪ್ಪೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ಪೊಟಾಷಿಯಂ, ತಾಮ್ರಾಂಶ, ಮ್ಯಾಗ್ನಿಷಿಯಂ ಮತ್ತು ನಾರಿನಂಶ ಅಧಿಕವಿರುತ್ತದೆ.

3. ಆಲೂಗೆಡ್ಡೆ ಸಿಪ್ಪೆಯಲ್ಲಿ 20% ಕಬ್ಬಿಣ ಮತ್ತು 8ಗ್ರಾಂ ಪ್ರೊಟೀನ್ ಇದ್ದು ಇತರ ತರಕಾರಿಗಳಿಗೆ ಹೋಲಿಸಿದರೆ ಆಲೂಗೆಡ್ಡೆ ಸಿಪ್ಪೆಯಲ್ಲಿ ಈ ಅಂಶಗಳು ಅಧಿಕವಿದೆ.

4. ಆಲೂಗೆಡ್ಡೆ ಸಿಪ್ಪೆ ಸೇವಿಸಿದರೆ ಹಾನಿಗೊಳಗಾದ ಜೀವ ಕಣಗಳನ್ನು ಮತ್ತೆ ಸರಿ ಪಡಿಸುವಂತೆ ಮಾಡುತ್ತದೆ.
ಆದರೆ ಆಲೂಗೆಡ್ಡೆ ಎಲ್ಲಾ ಅಹಾರಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಕರಿದ ಆಲೂಗೆಡ್ಡೆ ಕುರುಕುಲು ತಿಂಡಿ, ಇತರ ಕೊಬ್ಬಿನ ಪದಾರ್ಥಗಳ ಜೊತೆ ಸೇವಿಸುವುದು ಇವೆಲ್ಲವೂ ಹೃದಯ ಸಂಬಂಧಿ ಕಾಯಿಲೆಯನ್ನು ತರುತ್ತದೆ, ಆಲೂಗೆಡ್ಡೆಯನ್ನು ಸಿಪ್ಪೆ ಸಹಿತ ಬೇರೆ ತರೆಕಾರಿಗಳ ಜೊತೆ ಹಾಕಿ ಬೇಯಿಸಿ ತಿನ್ನವುದು ಆರೋಗ್ಯಕ್ಕೆ ಒಳ್ಳೆಯದು.

ಕ್ಯಾರೆಟ್

ಡಯಟ್ ಎಂದರೆ ಕೇವಲ ರುಚಿಯಿಲ್ಲದ ಆಹಾರದ ಸೇವನೆ ಎಂದು ಹಲವರು ತಪ್ಪು ತಿಳಿಯುತ್ತಾರೆ. ಆದರೆ ರುಚಿಯೊಂದಿಗೆ ತೂಕ ಇಳಿಸಿಕೊಳ್ಳುವ ವಿಧಾನವೊಂದು ಇಲ್ಲಿದೆ. ಕ್ಯಾರೆಟ್ ಡಯಟ್ ಪಾಲಿಸಿದರೆ ದೇಹದಲ್ಲಿನ ಅಧಿಕ ಬೊಜ್ಜನ್ನು ಕರಗಿಸಿಕೊಳ್ಳಬಹುದು ಎಂದು ತಿಳಿದುಬಂದಿದೆ.


ಕ್ಯಾರೆಟ್ ಹಸಿಯಾಗಿ ಬೇಕಾದರೂ ತಿನ್ನಬಹುದು, ಇಲ್ಲವೆಂದರೆ ಸೂಪ್, ಸಲಾಡ್ ಮತ್ತು ಜ್ಯೂಸ್ ನಂತೆಯೂ ಸೇವಿಸಬಹುದು. ಕ್ಯಾರೆಟ್ ನಲ್ಲಿನ ಅಧಿಕ ವಿಟಮಿನ್ ಕಣ್ಣಿನ ದೃಷ್ಟಿಯನ್ನೂ ಚುರುಕುಗೊಳಿಸುತ್ತೆ.


ಕ್ಯಾರೆಟ್ ಡಯಟ್- ನೈಸರ್ಗಿಕವಾಗಿ ತೂಕ ಇಳಿಸುವ ಮಾರ್ಗ


1. ಬೆಳಗ್ಗೆ: ಬ್ರೇಕ್ ಫಾಸ್ಟ್ ಗೆ ಕ್ಯಾರೆಟ್ ಜ್ಯೂಸ್ ಅಥವಾ ಮಿಲ್ಕ್ ಶೇಕ್ ಸೇವಿಸಬಹುದು. ಜೊತೆಗೆ ಒಂದು ಮೊಟ್ಟೆಯನ್ನೂ ಸೇವಿಸಬಹುದು.


2. ಮಧ್ಯಾಹ್ನ: ಟೋಸ್ಟೆಡ್ ಬ್ರೆಡ್ ಜೊತೆ ತುರಿದ ಕ್ಯಾರೆಟ್, ಟೊಮೆಟೊ, ಉಪ್ಪು ಮತ್ತು ಮೆಣಸನ್ನು ಬೆರೆಸಿ ತಿನ್ನಬೇಕು.


3. ರಾತ್ರಿ: ರಾತ್ರಿ ಊಟಕ್ಕೆ ಕ್ಯಾರೆಟ್ ಮತ್ತು ಬೇಳೆ ಬೆರೆಸಿ ತಯಾರಿಸಿದ ಸೂಪನ್ನು ಸೇವಿಸಬೇಕು ಮತ್ತು ಒಂದು ಕಪ್ ಕೆಂಪಕ್ಕಿ ಅನ್ನವನ್ನು ಮೊಸರಿನ ಜೊತೆ ಸೇವಿಸಿದರೆ ಹೊಟ್ಟೆ ತುಂಬಿದಂತಾಗುತ್ತದೆ.


ಕ್ಯಾರೆಟ್ ಬಗ್ಗೆ ಇನ್ನೂ ತಿಳಿಯಿರಿ:


1. ಕ್ಯಾರೆಟ್ ನಲ್ಲಿನ ಕಾರೊಟಿನ್ ಅಂಶ ದೇಹವನ್ನು ಶುದ್ಧವಿರಿಸಿ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.


2. ಕ್ಯಾರೆಟ್ ನಲ್ಲಿ 10 % ಕಾರ್ಬೊಹೈಡ್ರೇಟ್ ಇದೆ. ಅಷ್ಟೇ ಅಲ್ಲ, ಇದರಲ್ಲಿ ವಿಟಮಿನ್ ಎ, ಡಿ, ಇ, ಕೆ, ಪಿಪಿ, ಆಸ್ಕಾರ್ಬಿಕ್ ಆಸಿಡ್, ಸ್ಟೆರಾಲ್ ಮತ್ತು ಲೆಸಿತಿನ್ ಅಂಶವಿದೆ. ಇವೆಲ್ಲವೂ ಆರೋಗ್ಯಕ್ಕೆ ಹಿತವನ್ನುಂಟುಮಾಡುತ್ತದೆ.


3. ಕ್ಯಾರೆಟ್ ತಿನ್ನುವುದರಿಂದ ಹೃದಯದ ಸಮಸ್ಯೆಗಳನ್ನು ದೂರವಿಡಬಹುದು. ಮಂದ ದೃಷ್ಟಿ, ಕ್ಯಾನ್ಸರ್ ನಿವಾರಣೆಗು ಇದು ಸಹಕಾರಿ. ಕ್ಯಾರೆಟ್ ನಲ್ಲಿ ಐಯೋಡಿನ್ ಮತ್ತು ಫೈಬರ್ ಇರುವುದರಿಂದ ತೂಕವನ್ನು ಇಳಿಸಿಕೊಳ್ಳಬಹುದು.


ಮಧ್ಯಾಹ್ನ ಮತ್ತು ರಾತ್ರಿ ಲಘು ಊಟದ ನಂತರ ಕ್ಯಾರೆಟ್ ತಿಂದರೆ 3-4 ಕೆ.ಜಿ ತೂಕ ಇಳಿಸಿಕೊಳ್ಳುವುದು ಸಾಧ್ಯವಿದೆ.

ಸೋರೆಕಾಯಿ

ಸೋರೆಕಾಯಿ ದೇಹದ ಆರೋಗ್ಯ ಹೆಚ್ಚಿಸುವುದಷ್ಟೆ ಅಲ್ಲ, ತೂಕ ಕಡಿಮೆ ಮಾಡುವುದರಲ್ಲಿ ತುಂಬಾ ಪರಿಣಾಮಕಾರಿಯಾದ ತರಕಾರಿ. ಇದು ದೇಹದ ತೂಕ ಇಳಿಸುವಲ್ಲಿ ಹೇಗೆ ಸಹಾಯಕವಾಗಿದೆ ಎಂದು ನೋಡೋಣ ಬನ್ನಿ.


1. ಸೋರೆಕಾಯಿಯಲ್ಲಿ ನಾರಿನಂಶ ಅಧಿಕವಿರುವುದರಿಂದ ಹೊಟ್ಟೆ ತುಂಬುವುದು ಮತ್ತು ಜೀರ್ಣಕ್ರಿಯೆಗೆ ಸಹಾಯವಾಗಿದೆ.
2. ಬೆಳಗ್ಗೆ ತಿಂಡಿಯನ್ನು ಹೊಟ್ಟೆ ತುಂಬಾ ತಿನ್ನಬಾರದು.
3. ಕುರುಕಲು ತಿಂಡಿ ತಿನ್ನುವ ಬದಲು ಒಂದು ಲೋಟ ಸೋರೆಕಾಯಿ ಜ್ಯೂಸ್ ಮತ್ತು ಸ್ವಲ್ಪ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ಮಧ್ಯೆದಲ್ಲಿ ಹೊಟ್ಟೆ ಹಸಿದಾಗ ಎಣ್ಣೆ ತಿಂಡಿ ಬದಲು ಹಣ್ಣುಗಳನ್ನು ತಿನ್ನುವ ಅಭ್ಯಾಸ ಒಳ್ಳೆಯದು.
4. ಬರೀ ಸೋರೆಕಾಯಿ ಜ್ಯೂಸ್ ಕುಡಿದರಷ್ಟೆ ದೇಹದ ತೂಕ ಕಡಿಮೆಯಾಗುವುದಿಲ್ಲ. ಇದರ ಜೊತೆ ಕಟ್ಟುನಿಟ್ಟಿನ ವ್ಯಾಯಾಮ ಮಾಡಬೇಕು.
ಬರಿ ತೂಕ ಇಳಿಸುವಲ್ಲಿ ಮಾತ್ರವಲ್ಲ ಈ ಕೆಳಗಿನ ಗುಣಗಳಿಂದ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.


1. ಸೋರೆಕಾಯಿಯನ್ನು ಬೇಯಿಸಿ ಜ್ಯೂಸ್ ಮಾಡಿ ಕುಡಿದರೆ ದೇಹ ತಂಪಾಗುವುದು.


2. ಮೂತ್ರ ಉರಿ ಸಮಸ್ಯೆ ಇರುವವರು ಸೋರೆಕಾಯಿ ಜ್ಯೂಸ್ ಗೆ ಸ್ವಲ್ಪ ನಿಂಬೆರಸ ಸೇರಿಸಿ ದಿನಕ್ಕೆ ಒಂದು ಬಾರಿ ಕುಡಿದರೆ ತುಂಬಾ ಒಳ್ಳೆಯದು.


3. ಡಯಾರಿಯಾ ಉಂಟಾಗಿದ್ದರೆ ಅಥವಾ ಅಧಿಕ ಕರಿದ ಪದಾರ್ಥಗಳನ್ನು ತಿಂದಾಗ ಸೋರೆಕಾಯಿ ಜ್ಯೂಸ್ ಗೆ ಸ್ವಲ್ಪ ಉಪ್ಪು ಹಾಕಿ ಕುಡಿಯುವುದು ಒಳ್ಳೆಯದು. ಮಧುಮೇಹಿಗಳು ಈ ಜ್ಯೂಸ್  ಕುಡಿಯುವುದು ಒಳ್ಳೆಯದು.


4. ಬೇಸಿಗೆಯಲ್ಲಿ ವಿಪರೀತ ಬೆವರು ಬರುವವರು ಈ ಜ್ಯೂಸ್ ಕುಡಿದರೆ ಒಳ್ಳೆಯದು.

ನೀವು ಅರೋಗ್ಯವಾಗಿ ಹೆಚ್ಚು ಕಾಲ ಬದುಕ ಬೇಕಾದರೆ!

ನೀವು ಅರೋಗ್ಯವಾಗಿ ಹೆಚ್ಚು ಕಾಲ ಬದುಕ ಬೇಕಾದರೆ ಮಾಡಾಬೇಕಾದ ಕೆಲವು ಕಾರ್ಯಗಳು.

೧. ನೀವು ಹದಿನೆಂಟನೇ ವಯಸ್ಸಿನಲ್ಲಿ ಎಷ್ಟು ತೂಕವಿದ್ದಿರೋ ಈಗಲೂ ಹೆಚ್ಚು ಕಡಿಮೇ ಅದೇ ತೂಕ ದಲ್ಲಿರುವಂತೆ ನೊಡಿಕೊಳ್ಳಿ. ಮುಖ್ಯವಾಗಿ ನಿಮ್ಮ ಈಗಿನ ಸೊಂಟದ ಸುತ್ತಳತೆ ನಿಮ್ಮ ಹದಿನೆಂಟನೇ ವಯಸ್ಸಿನಲ್ಲಿ ಎಷ್ಟಿತ್ತೊ ಅಷ್ಟೇ ಇರುವಂತೆ ನೋಡಿಕೊಳ್ಳಿ. ಇದರಿಂದ ಹೃದಯದ ಖಾಯಿಲೆಗಳು ನಿಮ್ಮನ್ನು ಕಾಡುವುದಿಲ್ಲ.


೨. ದಿನದಲ್ಲಿನ ಒಂದು ಹೊತ್ತು ಊಟ ಕಡಿಮೆ ಮಾಡಿ. ಓಂದು ಹೊತ್ತು ಊಟ ಕಡಿಮೆ ಮಾಡಲಾಗದಿದ್ದರೂ ಮಾಡುವ ಪ್ರತಿಯೊಂದು ಊಟವನ್ನೂ ಹೊಟ್ಟೆ ಬಿರಿಯುವಂತೆ ತಿನ್ನದೇ ಇನ್ನು ಸ್ವಲ್ಪ ತಿನ್ನಬಹುದು ಎಂಬಲ್ಲಿಗೆ ಊಟ ಮುಗಿಸದರೆ ಒಳ್ಳ್ತೆಯದು. ಹೆಚ್ಚು ಊಟಮಾಡುವುದರಿಂದ ನಮ್ಮ ದೇಹದ ಎಲ್ಲ ಕೊಶಗಳಿಗು ಹೆಚ್ಚಿನ ಒತ್ತಡ ತರುತ್ತದೆ , ಈ ಒತ್ತಡವೇ ಹಲವಾರು ಖಾಯಿಲೆಗಳ ತವರೂರು.


೩. ಹೇರಳವಾಗಿ ನೀರು ಕುಡಿಯಬೇಕು. ಮನುಷ್ಯನ ದೇಹ ಶೇಕಡ ೭೦ ಕ್ಕಿಂತ ಹೆಚ್ಚು ನೀರಿನಿಂದ ಮಾಡಲ್ಪಟ್ಟಿದೆ. ಹಾಗಾಗಿ ನೀರು ನಮ್ಮ ಆಹಾರದ ಮುಖ್ಯ ಭಾಗವಾಗಿರಬೇಕು. ಹಾಗೆಂದು ನೀವು ಮಾರುಕಟ್ಟೆ ಯಲ್ಲಿ ಸಿಗುವ ತರಾವರಿ ಜ್ಯೂಸ್ ಕುಡಿದರೆ ಅದು ನೀರು ಕುಡಿದಂತಲ್ಲ. ನಮ್ಮ ಸಂಪ್ರದಾಯದಂತೆ ತಾಮ್ರದ ಚಂಬಿನಲ್ಲಿ ಶೇಖರಿಸಿಟ್ಟ ನೀರು ಕುಡಿಯುವುದು ನಮ್ಮ ಲಿವರಿನ ಅರೊಗ್ಯಕ್ಕೆ ಉತ್ತಮ. ನೀರು ನಮ್ಮ ದೇಹದ ಕಲ್ಮಷಗಳನ್ನು ದೇಹದಿಂದ ಹೊರಹಾಕಿಸುತ್ತದೆ, ಪ್ರತಿಯೊಂದು ಕೋಶಕ್ಕೂ ಆಹಾರವನ್ನು ತಲುಪಿಸುತ್ತದೆ.


೪. ನಮ್ಮ ಅಹಾರದ ಶೇಕಡ ೭೦ ಭಾಗ ತರಕಾರಿ ಮತ್ತು ಹಣ್ಣಿನಿಂದ ಕೂಡಿರಬೇಕು. ಸಸ್ಯಾಹಾರ ನಮ್ಮ ದೇಹಕ್ಕೆ ಅತ್ತ್ಯುತ್ತಮ. ಜೀವದಿಂದ ತುಂಬಿರುವ ತರಕಾರಿ ಮತ್ತು ಹಣ್ಣು ಗಳನ್ನು ತಿನ್ನುವುದು ನಿರ್ಜೀವವಾದ ಮಾಂಸಾಹಾರ ತಿನ್ನುವುದಕ್ಕಿಂತ ಎಷ್ಟೋ ಮೇಲು.


೫. ದಿನದ ಮುಂಜಾನೆ ಮತ್ತು ಮುಸ್ಸಂಜೆಯ ವೇಳೆ ಮೂವತ್ತು ನಿಮಿಷಗಳಕಾಲ ಹೊರಗಡೆ ಶುದ್ದವಾದ ಗಾಳಿ ಸಿಗುವಕಡೆ ಓಡಾಡುವುದು ನಮ್ಮ ಆರೊಗ್ಯಕ್ಕೆ ಉತ್ತಮ. ಈ ಸಮಯಗಳಲ್ಲಿ ಹೊರಗಡೆಯಿರುವುದರಿಂದ ನಮ್ಮ ದೇಹದ ಜೈವಿಕ ಗಡಿಯಾರದ ಚಾಲನೆ ಉತ್ತಮಗೊಳ್ಳುತ್ತದೆ. ಹಾಗೆಯೆ ನಮ್ಮ ಪಾದವು ಪಾದರಕ್ಷೆಗಳಿಲ್ಲ್ಸದೇ ಹುಲ್ಲಿನ ಮೇಲಾಗಲಿ ಮಣ್ಣಿನ ಮೇಲಾಗಲಿ ನಡೆದಾಡಿದರೆ ನಮ್ಮಲ್ಲಿನ ನೆಗೆಟಿವ್ ಶಕ್ತಿಯನ್ನು ಭೂಮಿ ಹೀರಿಕೊಳ್ಳುತ್ತದೆ.


೬. ನಿಮ್ಮ ಮನಸ್ಸು ಸದಾ ನೀವು ಉಸಿರಾಡುವುದನ್ನು ಗಮನಿಸುತ್ತಿರಲಿ. ಸಾಮಾನ್ಯ ನಾವ್ಯರೂ ಉಸಿರಾಡುವುದನ್ನು ಗಮನಿಸುವುದೇ ಇಲ್ಲಾ. ನಾವು ಅನ್ನ ನೀರು ಇಲ್ಲದೇ ದಿನಗಟ್ಟಲೇ ಬದುಕಿರಬಹುದು ಆದರೇ ಉಸಿರಾಟವಿಲ್ಲದೇ ಕೆಲವು ಗಂಟೆಗಳ ಕಾಲ ಕೂಡಾ ಬದುಕಿರಲಾರೆವು. ಇಷ್ಟೋಂದು ಮುಖ್ಯವಾಗಿರು ಉಸಿರಾಟವನ್ನು ನಾವ್ಯಾರೂ ಗಮನಿಸುವುದೇ ಇಲ್ಲಾ, ಹಾಗಾಗಿ, ನಾವು ಉಸಿರಾಡುವ ರೀತಿ ಅನಿಯಮಿತವಾಗಿರುತ್ತದೆ. ನಾವು ಯಾವಾಗಲೂ ನಿಯಮಿತವಾಗಿ ಧೀರ್ಘವಾಗಿ ಮತ್ತು ಸುಲಲಿತವಾಗಿ ಉಸಿರಾಡುವುದನ್ನು ಕಲಿಯಬೇಕು. ನಮ್ಮ ಮನಸ್ಸನ್ನು ಉಸಿರಾಟದ ಮೇಲೆ ಕೇಂದ್ರೀಕರಿಸುವುದರಿಂದ ಮಾತ್ರ ನಮ್ಮ ಉಸಿರಾಟವನ್ನು ನಿಯಮಿತ ಗೊಳಿಸು ವುದು ಸಾಧ್ಯ. ಯೊಗದಲ್ಲಿ ಹೇಳುವ ಪ್ರಾಣಾಯಾಮ ಈ ಅಂಶವನ್ನೇ ಒತ್ತಿ ಹೇಳುತ್ತದೆ. ಹಾಗೆ ಯೋಗದ ಅತ್ತ್ಯುತ್ತಮ ಸ್ಟಿತಿಯಾದ ಸಮಾಧಿ ಸ್ಟಿತಿ ಸೇರಲು, ನಮ್ಮ ಉಸಿರಾಟ ಕ್ರಿಯೆಯನ್ನು ನಿಯಮಿತ ಗೊಳಿಸುವ ಮತ್ತು ನಮ್ಮ ಮನಸ್ಸ್ಸನ್ನು ಉಸಿರಾಟದಲ್ಲಿ ಕೇಂದ್ರೀಕರಿಸುವುದು ಮೊದಲನೇ ಹೆಜ್ಜೆ.


೭. ದಿನಕ್ಕೆ ೭ರಿಂದ ೮ ಗಂಟೆ ನಿದ್ದೆ ಮಾಡುವುದು ನಮ್ಮ ಆರೋಗ್ಯಕ್ಕೆ ಅತ್ಯವಶ್ಯಕ.


೮. ಧೂಮಪಾನ ಮತ್ತು ಅಲ್ಕೋಹಾಲ್ ಗಳಿಂದ ದೂರವಿರಬೇಕು.

ಕರಿಬೇವಿನಿಂದ ದೇಹದ ತೂಕ ಕಡಿಮೆಯಾಗುವುದೆ?


ಕರಿಬೇವಿನಿಂದ ದೇಹದ ತೂಕ ಕಡಿಮೆಯಾಗುವುದೆ?
ಕರಿಬೇವಿನ ಎಲೆಯನ್ನು ಅಡುಗೆಯಲ್ಲಿ ಬಳಸಿದರೆ ಅಡುಗೆ ಘಮ್ಮೆನ್ನುವುದು. ಕೂದಲಿನ ಆರೈಕೆಯಲ್ಲಿ ಕೂಡ ಕರಿಬೇವಿನ ಎಲೆಯನ್ನು ಬಳಸಲಾಗುವದು. ರುಚಿ, ಸೌಂದರ್ಯ, ಆರೋಗ್ಯಕ್ಕೆ ಹೀಗೆ ಅನೇಕ ಗುಣಗಳನ್ನು ಈ ಕರಿಬೇವು ಹೊಂದಿದೆ. ಬನ್ನಿ ಕರಿಬೇವಿನ ನಾನಾ ರೀತಿಯ ಉಪಕಾರಗಳ ಬಗ್ಗೆ ತಿಳಿಯೋಣ:

1.
ಹೊಟ್ಟೆ ಸಮಸ್ಯೆ ಮತ್ತು ಅಜೀರ್ಣ ನಿವಾರಿಸಲು ಕರಿಬೇವು ಒಳ್ಳೆಯದು. ಕರಿಬೇವಿನ ಎಲೆಯಿಂದ ರಸ ಹಿಂಡಿ ಸ್ವಲ್ಪ ನಿಂಬೆ ರಸ ಮತ್ತು ಸಕ್ಕರೆ ಸೇರಿಸಿ ತಿಂದರೆ ಹೊಟ್ಟೆ ಮತ್ತು ಅಜೀರ್ಣ ಸಮಸ್ಯೆ ನಿವಾರಣೆಯಾಗುವುದು.
2. ದಿನವೂ ಕರಿಬೇವಿನ ಎಲೆ ತಿಂದರೆ ದೇಹದ ತೂಕ ಕಡಿಮೆಯಾಗುವುದು.
3. ಕೂದಲು ಸೊಂಪಾಗಿ ಬೆಳೆಯಲು ಮತ್ತು ಅಕಾಲಿಕ ನೆರೆ ತಡೆಗಟ್ಟಲು ಕರಿಬೇವು ತುಂಬಾ ಸಹಾಯಕಾರಿ. ಅದನ್ನು ಹಾಗೇ ತಿನ್ನಲು ಇಷ್ಟವಿಲ್ಲದಿದ್ದರೆ ಕರಿಬೇವಿನ ಎಲೆಯನ್ನು ಹುರಿದು ಪುಡಿ ಮಾಡಿ ಅದನ್ನು ದೋಸೆ ಜೊತೆ ತಿನ್ನಬಹುದು.
4. ತಲೆಗೆ ಹಚ್ಚುವ ಎಣ್ಣೆಗೆ ಸ್ವಲ್ಪ ಕರಿಬೇವಿನ ಎಲೆ ಹಾಕಿ ಕುದಿಸಿ ಆ ಎಣ್ಣೆಯನ್ನು ತಲೆಗೆ ಹಚ್ಚುವುದು ಒಳ್ಳೆಯದು.

ಕ್ಯಾನ್ಸರ್‌ಗೆ ರಾಮಬಾಣ ದ್ರಾಕ್ಷಿ ಹಣ್ಣಿನ ಬೀಜ


ಕ್ಯಾನ್ಸರ್‌ಗೆ ರಾಮಬಾಣ ದ್ರಾಕ್ಷಿ ಹಣ್ಣಿನ ಬೀಜ

ದ್ರಾಕ್ಷಿ ಹಣ್ಣಿನ ಬೀಜದ ಸತ್ವವು ತಲೆ ಮತ್ತು ಕ
ತ್ತಿಗೆ ಎಲುಬಿನ ಕೋಶ ಕಾರ್ಸಿನೋಮಾ ಕೋಶಗಳನ್ನು ಆರೋಗ್ಯವಂತ ಕೋಶಗಳಿಗೆ ಹಾನಿಯಾಗದಂತೆ ಅವುಗಳನ್ನು ಕೊಲ್ಲುತ್ತದೆಂದು ಭಾರತೀಯ ಮೂಲದ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಇವರು ತಮ್ಮ ಪ್ರಯೋಗವನ್ನು ಇಲಿಯ ಮಾದರಿಗಳಲ್ಲಿ ಪ್ರಯೋಗಿಸಿ ಸಂಶೋಧನೆ ನಡೆಸಿದ್ದಾರೆ.

ಅಮೇರಿಕಾದಲ್ಲಿ ಹತ್ತಿರ ಹತ್ತಿರ 12,000
ದಷ್ಟು ಜನರು ತಲೆ ಹಾಗೂ ಕುತ್ತಿಗೆ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿದ್ದು ಈ ವರ್ಷ ಸಾವಿನ ಸಂಖ್ಯೆಯು ಅರ್ಧ ಮಿಲಿಯನ್ ಅನ್ನು ದಾಟಿದೆ.

ಈ ರೋಗವು ದೇಹದ ಆರೋಗ್ಯವಂತ ಕೋಶಗಳ ಹೆಚ್ಚಿನ ಭಾಗವನ್ನು
ಆಕ್ರಮಿಸಿದ್ದು, ಅವುಗಳನ್ನು ಹಾನಿಗೊಳಪಡಿಸುವ ಶಕ್ತಿಯನ್ನು ಇವುಗಳು ಪಡೆದುಕೊಂಡಿದೆ. "ಇದೊಂದು ನಾಟಕೀಯ ಪರಿಣಾಮವಾಗಿದೆ ಎಂದು ಕೊಲೆರಾಡೊ ಕ್ಯಾನ್ಸರ್ ಸಂಸ್ಥೆಯ ಸಂಶೋಧಕ ರಾಜೇಶ್ ಅಗರ್‌ವಾಲ್ ತಿಳಿಸಿದ್ದಾರೆ.

ಕ್ಯಾನ್ಸರ್ ಕೋಶಗಳು ಹೆಚ್ಚು ವೇಗವಾಗಿ
ಬೆಳೆಯುವ ಕೋಶಗಳಾಗಿವೆ. ಅದೂ ಅಲ್ಲದೆ, ಸಾಮಾನ್ಯವಾಗಿ ಶೀಘ್ರ ಬೆಳವಣಿಗೆಯ ಕೋಶಗಳಾಗಿದ್ದು, ಅವುಗಳು ಬೆಳೆಯಲಾರದ ಸ್ಥಿತಿಗೆ ಬಂದಾಗ ಅವುಗಳು ಸಾಯುತ್ತವೆ ಎಂದವರು ತಿಳಿಸಿದ್ದಾರೆ.

ದ್ರಾಕ್ಷಿ ಬೀಜದ ಸತ್ವವು ಅವು ಬೆಳೆಯಲಾಗದೆ ಇರುವಂತಹ ಸ್ಥಿತಿಯನ್ನು ಉಂಟುಮಾಡುವುದರಿಂದ ಅವುಗಳು ಬೆಳೆಯಲಾರವು.


ನಿರ್ದಿಷ್ಟವಾಗಿ,
ದ್ರಾಕ್ಷಿ ಬೀಜದ ಸತ್ವವು ಕ್ಯಾನ್ಸರ್ ಕೋಶಗಳಾದ ಡಿಎನ್‌ಎಗೆ ಹಾನಿ ಉಂಟು ಮಾಡುತ್ತವೆ ಮತ್ತು ಅದು ಪುನಃ ಸರಿಯಾಗುವಂತಹ ದಾರಿಯನ್ನು ನಿಲ್ಲಿಸುತ್ತದೆ.

ಇದರ ಬಗೆಗಿನ ಪ್ರಯೋಗವನ್ನು ಮೊದಲು ಇಲಿಗಳ ಮೇಲೆ ಮಾಡಲಾಗಿತ್ತು ಅವುಗಳ ಮೇಲೂ ಇದು ಉತ್ತಮ ಪರಿಣಾಮವನ್ನು ಬೀರಿತ್ತು.


ದ್ರಾಕ್ಷಿ ಬೀಜದ ಸಾರವು ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತಾದರೂ ಆರೋಗ್ಯವಂತ ಕೋಶಗಳಿಗೆ ಇದು ಯಾವುದೇ ರೀತಿಯ ಹಾನಿಯನ್ನುಂಟುಮಾಡುವುದಿಲ್ಲ.


ಕ್ಯಾನ್ಸರ್ ಕೋಶಗಳ ದಾರಿಯನ್ನು ನಾವು ಮುಚ್ಚುವುದರಿಂದ ಅವುಗಳ ಬೆಳವಣಿಗೆ
ಕುಂಠಿತಗೊಳ್ಳುತ್ತವೆ ಆದರೆ ಆರೋಗ್ಯವಂತ ಕೋಶಗಳ ಬಗ್ಗೆ ಈ ರೀತಿಯ ನಂಬಿಕೆ ಸತ್ಯವಾಗಿರುವುದಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ.
ದ್ರಾಕ್ಷಿ ಹಣ್ಣಿನ ಬೀಜ ಕ್ಯಾನ್ಸರ್ ಕೊಲೆರಾಡೊ ಕ್ಯಾನ್ಸರ್ ಸಂಸ್ಥೆ
.

ಕೆಂಪು ತರಕಾರಿಯ 4 ಆರೋಗ್ಯಕರ ಗುಣಗಳು


ಕೆಂಪು ತರಕಾರಿಯ 4 ಆರೋಗ್ಯಕರ ಗುಣಗಳು

ಪೋಷಕಾಂಶ ಇರುವ ಆಹಾರಗಳನ್ನು ಡಯಟ್ ನಲ್ಲಿ ಪಾಲಿಸಬೇಕೆಂದು ಹೇಳುವಾಗ ತಕ್ಷಣ ನೆನೆಪಾಗುವುದು ಹಸಿ ಸೊಪ್ಪು, ತರಕಾರಿಗಳು. ಆದರೆ ಇವುಗಳಷ್ಟೆ ಕೆಂಪು ಬಣ್ಣದ ತರಕಾರಿಗಳು ತೂಕ ಇಳಿಸುವಲ್ಲಿ ಮತ್ತು ಆರೋಗ್ಯವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿದೆ. ಕೆಂಪು ತರಕಾರಿಯ ಗುಣಗಳ ಬಗ್ಗೆ ತಿಳಿಯೋಣ ಬನ್ನಿ.

1. ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ: ಕೆಂಪು ಬಣ್ಣದ ತರಕಾರಿಗಳಲ್ಲಿರುವ ಲೈಕೊಪೆನೆ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಕೆಂಪು ತರಕಾರಿಗಳು ಗರ್ಭಕೋಶದ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ.
ಈ ಲೈಕೊಪೆನೆ ಅಂಶ ಟೊಮೆಟೊದಲ್ಲಿ ಅಧಿಕವಾಗಿ ಕಂಡುಬರುತ್ತದೆ.

2. ರಕ್ತ ಹೀನತೆ ತಡೆಗಟ್ಟುವುದು: ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಕಾಯಿಲೆ ರಕ್ತಹೀನತೆ. ಬೀಟ್ ರೂಟ್ಸ್ ನಲ್ಲಿರುವ ಕ್ಯಾರೋಟಿನ್ಸ್ ಮತ್ತು ಅಧಿಕ ಮ್ಯಾಗ್ನೆಸೆ ಅಂಶ ದೇಹದಲ್ಲಿ ರಕ್ತ ಕಣಗಳು ಹೆಚ್ಚಾಗಲು ಸಹಕಾರಿಯಾಗಿದೆ.

3. ವಿಟಮಿನ್ ಗಳು: ಈ ಕೆಂಪು ತರಕಾರಿಗಳಲ್ಲಿ ಅಧಿಕ ವಿಟಮಿನ್ ಸಿ ಮತ್ತು ವಿಟಮಿನ್ ಎ ಇದೆ. ಇದರಲ್ಲಿರುವ ಬೇಟಾ ಕ್ಯಾರೊಟಿನ್ ಶ್ವಾಸಕೋಶದ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿಯಾಗಿದೆ.

4. ಕ್ಯಾಲೋರಿ ಕಡಿಮೆ ಮಾಡುತ್ತೆ: ಈ ತರಕಾರಿಗಳಲ್ಲಿ ಕ್ಯಾಲೋರಿ ಕಡಿಮೆ ಇದ್ದು ಇವುಗಳನ್ನು ತಿನ್ನುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದು.

ಆಹಾರಕ್ಕೆ ಪರ್ಯಾಯ ಪದವೇ ಕೆಂಪಕ್ಕಿ ಅನ್ನ

ಆಹಾರಕ್ಕೆ ಪರ್ಯಾಯ ಪದವೇ ಕೆಂಪಕ್ಕಿ ಅನ್ನ

ಭತ್ತದಿಂದ ಅಕ್ಕಿ, ಅಕ್ಕಿಯಿಂದ ಅನ್ನ, ಆಹಾರಕ್ಕೆ ಪರ್ಯಾಯ ಪದವೇ ಅನ್ನ. ದಕ್ಷಿಣ ಭಾರತದಲ್ಲಿ ನಾವು ಹೆಚ್ಚು ಉಪಯೋಗಿಸುವ ಆಹಾರವೇ ಅನ್ನ. ಹಿಂದೆ ಒಬ್ಬನ ಶಕ್ತಿಯನ್ನು ಅಳೆಯುತ್ತಿದ್ದುದೇ ಅವನು ತಿನ್ನುವ ಅನ್ನದ ಅಳತೆಯಿಂದ. "ಪಾವಕ್ಕಿ ತಿಂದು ಅರಗಿಸಿಕೊಳ್ಳುತ್ತಾನೆ, ಸೇರಕ್ಕಿ ತಿಂದು ಅರಗಿಸಿಕೊಳ್ಳುತ್ತಾನೆ." ಎಂಬ ನಾಣ್ಣುಡಿಯಿದೆ.

ನಾವು ಮಾಡುತ್ತಿದ್ದ ಹಾಗೂ ಮಾಡುತ್ತಿರುವ ತಪ್ಪು ಇದೇ. ಅವಶ್ಯಕತೆಗಿಂತ ಹೆಚ್ಚು ಅನ್ನವನ್ನು ತಿನ್ನಬಾರದು. ಬಹುಶಃ ಭತ್ತವನ್ನು ಬೆಳೆಯುವ ಕಲೆಯನ್ನು ಕಲಿತ ಮೇಲೆ ದಿನನಿತ್ಯದ ಆಹಾರ ಹುಡುಕಬೇಕಾದ ಕಷ್ಟ ತಪ್ಪಿ ಮನುಷ್ಯ ನಿರಾಳನಾದನೆಂದು ಕಾಣುತ್ತದೆ. ಅದರಿಂದ, ಅನ್ನ ಅವನ ಎಲ್ಲಾ ಆಹಾರಪದಾರ್ಥಗಳಲ್ಲಿ ಮೊದಲ ಸ್ಥಾನ ಪಡೆಯಿತು.

ಈಗ ಉಪಯೋಗಿಸುತ್ತಿರುವ ಬಿಳಿಯ ಅಕ್ಕಿ ಯಾವ ಅಳತೆಗೋಲಿನಿಂದಲೂ ಸರಿಯಾದ ಆಹಾರ ಪದಾರ್ಥವಲ್ಲ. ತೌಡಿನಲ್ಲಿ ಎಲ್ಲಾ ಸತ್ವಗಳು ಹೊರಟುಹೋಗಿರುತ್ತವೆ. ನಾವು ಅಕ್ಕಿ ಎಂದು ಹೇಳಿದರೆ ಅದು ಕೆಂಪಕ್ಕಿಯೇ. ಹಿಂದೆ ಇದರಲ್ಲಿ ಅನೇಕ ತಳಿಗಳಿದ್ದವು.

ಈಗ 'ದೇವಮಲ್ಲಿಗೆ' ಎಂಬ ಒಂದೇ ರೀತಿಯ ತಳಿ ಉಳಿದಿದೆ. ಅದನ್ನೂ ಸಹ ಹೆಚ್ಚು ಪಾಲೀಶ್ ಮಾಡಿರುತ್ತಾರೆ. ಹಾಗೆ ಮಾಡದಂತೆ ವಿನಂತಿಸಿಕೊಳ್ಳಬೇಕು. ಅಕ್ಕಿಯನ್ನು ತಿಕ್ಕಿ ತಿಕ್ಕಿ ಅನೇಕ ಸಲ ತೊಳೆಯಬಾರದು. ಧೂಳು ಹೋಗುವಂತೆ ಒಮ್ಮೆ ತೊಳೆದರೆ ಸಾಕು. ಇಲ್ಲದಿದ್ದರೆ ಜೀವಸತ್ವಗಳು ನಷ್ಟವಾಗುತ್ತವೆ.

ಗಂಜಿಯನ್ನು ಬಸಿದು ಗಟಾರಕ್ಕೆ ಚೆಲ್ಲಬಾರದು. ಗಂಜಿಯನ್ನು ಇಂಗಿಸಿ ಅನ್ನ ಮಾಡಬೇಕು. ಇಲ್ಲದಿದ್ದರೆ ರೈಸ್ ಕುಕ್ಕರ್‍ನಲ್ಲಿ ಅನ್ನ ಮಾಡಬೇಕು.

ಅಕ್ಕಿಯಲ್ಲಿನ ಆಹಾರ ಸತ್ವಗಳು : ಪ್ರತಿ 100 ಗ್ರಾಂ ನಲ್ಲಿ : ನೀರು 13.3%, ಸಸಾರಜನಕ 7.5%, ಖನಿಜಗಳು 0.9%, ಕ್ಯಾಲ್ಸಿಯಂ 10 ಮಿ.ಗ್ರಾಂ, ನಾರು 0.6%, ಪಿಷ್ಟ 76.7%, ಕ್ಯಾಲೋರಿ 346, ರಂಜಕ 90 ಮಿ.ಗ್ರಾಂ, ಕಬ್ಬಿಣ 3.2 ಮಿ.ಗ್ರಾಂ, ವಿಟಮಿನ್ 'ಬಿ'

ಅಕ್ಕಿ ಬೆಳೆದ ಕಥೆ : ಕ್ರಿಸ್ತಪೂರ್ವ 3000 ದಿಂದ ಉಪಯೋಗಿಸುತ್ತಿರುವ ದಾಖಲೆಗಳಿವೆ. ಅಕ್ಕಿ, ರಾಗಿ, ಗೋಧಿ ಮೂರೂ ಪಿಷ್ಟ ಪದಾರ್ಥಗಳೇ ಆದರೂ ಅಕ್ಕಿಯಲ್ಲಿನ ಪಿಷ್ಟದಲ್ಲಿ ಅಮೈಲೋಪೆಕ್ಟಿನ್ ಎಂಬ ಅಂಶ ಹೆಚ್ಚು ಇದೆ. ಇದರಿಂದ ಗೋಧಿ, ರಾಗಿಗಳಿಗಿಂತ ಬೇಗ ಜೀರ್ಣವಾಗುತ್ತದೆ.

ಆದ್ದರಿಂದ ಮುದುಕರು, ರೋಗಿಗಳು,ಮಕ್ಕಳಿಗೆ ಅಕ್ಕಿ ಉತ್ತಮ ಆಹಾರ. ಇದರಲ್ಲಿರುವ ಸಸಾರಜನಕದ ಭಾಗ 7.5% ಮಾತ್ರ. ಆದರೆ ಇದರಲ್ಲಿಯ ಎಂಟು ಅವಶ್ಯ ಅಮೈನೋ ಆಮ್ಲಗಳಿವೆ. ಇವು ಒಳ್ಳೆಯ ಚರ್ಮ, ಕಣ್ಣಿನ ಹೊಳಪು ಉಂಟುಮಾಡುವುದಲ್ಲದೆ, ಹೃದಯ, ಶ್ವಾಸಕೋಶ, ಮಸ್ತಿಷ್ಕ ಮುಂತಾದುವುಗಳ ಜೀವಕೋಶಗಳನ್ನು ಬೆಳಸುತ್ತವೆ.

ಇದರಲ್ಲಿರುವ 'ಬಿ' ಕಾಂಪ್ಲೆಕ್ಸ್, ಥಯಾಮಿನ್, ರಿಬೋಫ್ಲೇವಿನ್ ಮತ್ತು ನಯಾಸಿನ್ ಗಳಿಂದ ಕೂಡಿದೆ. ಇದರಿಂದ ಚರ್ಮದ ಆರೋಗ್ಯ, ನರಗಳು, ಹಾರ್ಮೋನ್, ಇವುಗಳ ಬೆಳವಣಿಗೆಗೆ ಸಹಾಯಕ. ಶರೀರದ ಒಳಗಿನ ನೀರಿನ ಸಮತ್ವವನ್ನು ಕಾಯುತ್ತದೆ. ಕಬ್ಬಿಣವನ್ನು ರಕ್ತಕ್ಕೆ ಕೊಡುವುದರಿಂದ 'ಅನೀಮಿಯ' ಗುಣವಾಗುತ್ತದೆ.

ಆಯುರ್ವೇದ ಅಕ್ಕಿಯ ಬಗ್ಗೆ ಹೀಗೆ ಹೇಳುತ್ತದೆ. 'ರಕ್ತಶ್ಹಲಿರ್ವರಸ್ತೇಷಾಂ ಬಲ್ಯೋವ್ರಣ ತ್ರಿದೋಷಜಿತ್! ಚಕ್ಷುಷ್ಯೋ ಮೂತ್ರಲಃ ಸ್ವರ್ಯಃ ಶುಕ್ರಲಃ ತೃಟ್ ಜ್ವರಾಪಹಃ'-ಕೆಂಪು ಅಕ್ಕಿ ಬೇರೆ ಎಲ್ಲಾ ಅಕ್ಕಿಗಳಿಗಿಂತ ಶ್ರೇಷ್ಠವಾದದ್ದು.

ಅದು ಬಲಕಾರಿ,ಗಾಯಗಳನ್ನು ವಾಸಿಮಾಡುವುದು. ಮೂತ್ರ ದೋಷಗಳನ್ನೂ ತೆಗೆಯುವುದು, ಕಣ್ಣಿಗೆ ಹಿತಕರ, ಮೂತ್ರವನ್ನು ಸಡಿಲಿಸುವುದು, ಧ್ವನಿಯ ಆರೋಗ್ಯಕ್ಕೆ ಒಳ್ಳೆಯದು, ವೀರ್ಯವರ್ಧಕ, ಅತಿಯಾದ ಬಾಯಾರಿಕೆ, ಜ್ವರವನ್ನು ಕಳೆಯುವುದು. ಈ ಗುಣಗಳಿಂದ ಎಲ್ಲೆಲ್ಲಿ ಅದನ್ನು ಉಪಯೋಗಿಸಬೇಕೆಂದು ಅರಿವಾಗುತ್ತದೆ.

ಕಫದ ಕಾಯಿಲೆಗಳಲ್ಲಿ ಇದು ವರ್ಜ್ಯ. ಮಧುರ ರಸವು ಕಫವನ್ನು ಹೆಚ್ಚಿಸುವುದು. ನೆಗಡಿ, ಕೆಮ್ಮು, ಆಸ್ತಮಾಗಳಲ್ಲಿ ಹೆಚ್ಚು ಬಳಸಬಾರದು. ಅಕ್ಕಿಯಲ್ಲಿ ಕೊಬ್ಬು ಕಡಿಮೆ. ಕೆಂಪಕ್ಕಿಯಲ್ಲಿರುವ ಕ್ಯಾಲ್ಸಿಯಂ ಲವಣವು ನರಗಳ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವುದು. ಆದ್ದರಿಂದ ರಕ್ತದೊತ್ತಡದ ರೋಗಿಗಳಿಗೆ ಉತ್ತಮ ಆಹಾರ.

ಜೀರ್ಣಾಂಗಗಳಲ್ಲಿನ ಎಲ್ಲಾ ತೊಂದರೆಗಳಲ್ಲಿ ಅನ್ನವು ಬಹಳ ಉಪಕಾರಿ. ಇದರಲ್ಲಿ ನಾರಿನ ಅಂಶ ಕಡಿಮೆ ಇರುವುದರಿಂದ ಹೊಟ್ಟೆಗೆ ಹಿತಕರ. ಎಲ್ಲಾ ಜೀರ್ಣಾಂಗಗಳ ತೊಂದರೆಯಲ್ಲಿಯೂ ಇದನ್ನು ಉಪಯೋಗಿಸಬಹುದು. ಭೇದಿಯಲ್ಲಿಯೂ ಕೂಡ ಅನ್ನವನ್ನು ಗಂಜಿಯ ರೂಪದಲ್ಲಿ ಕೊಡಬಹುದು.

ಮೇಲೆ ಹೇಳಿದ ಎಲ್ಲಾ ಕಾರಣಗಳಿಂದ ಅನ್ನವು ಶರೀರಕ್ಕೆ ಅನುಕೂಲಕರವೆಂಬುದು ವ್ಯಕ್ತವಾಗುವುದು, ಆದರೆ ಕೆಂಪಕ್ಕಿಯನ್ನು ಉಪಯೋಗಿಸಬೇಕು. ಈ ಅನ್ನವನ್ನೂ ಸಹ ಹೆಚ್ಚು ತರಕಾರಿಗಳ ಜೊತೆ, ಮೊಳಕೆಯ ಕಾಳುಗಳೊಂದಿಗೆ ಸೇವಿಸಬೇಕು. ಜತೆಗೆ ಹಣ್ಣು, ಹಾಲು, ಮೊಸರು ಇತ್ಯಾದಿಗಳಿರಬೇಕು.

ಯಾವಾಗಲೂ ಅನ್ನ-ಸಾರು, ಬರೀ ಮೊಸರನ್ನ ಇಷ್ಟನ್ನೇ ಸೇವಿಸುತ್ತಿರಬಾರದು. ಸಮತ್ವದಿಂದ ಕೂಡಿದ್ದಲ್ಲಿ ತೊಂದರೆಯಿರುವುದಿಲ್ಲ. ನಾವು ಮಸಾಲೆಯೊಂದಿಗೆ ಬರೀ ಅನ್ನವನ್ನು ತಿನ್ನುವ ರೂಢಿ ಮಾಡಿಕೊಂಡಿದ್ದೇವೆ. ಇದು ತಪ್ಪು. ಹಿಂದಿನವರ ಆಹಾರದಲ್ಲಿಯೂ ಸಹ ಎಲ್ಲೂ ಬರೀ ಅನ್ನವಿರಲಿಲ್ಲ. ವೈವಿಧ್ಯಮಯವಾದ ಸೊಪ್ಪು-ತರಕಾರಿಗಳು, ಹಣ್ಣುಗಳು, ಹಾಲು ಇತ್ಯಾದಿಗಳಿದ್ದವು.

ಖರ್ಜೂರದ ಪ್ರಮುಖ 8 ಆರೋಗ್ಯಕರ ಗುಣಗಳು

ಖರ್ಜೂರದ ಪ್ರಮುಖ 8 ಆರೋಗ್ಯಕರ ಗುಣಗಳು

ದಿನವೂ ಖರ್ಜೂರ ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಗುಣಗಳಿವೆ. ತಿನ್ನಲು ಸಿಹಿಯಾಗಿರುವ ಈ ಹಣ್ಣು ಆರೋಗ್ಯದ ಸಿಹಿ ಹೆಚ್ಚಿಸುವಲ್ಲಿ ಎಷ್ಟು ಪರಿಣಾಮಕಾರಿ ಎಂದು ತಿಳಿಯಲು ಮುಂದೆ ಓದಿ.

1. ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಸುಲಭವಾಗಿ ಜೀರ್ಣವಾಗುತ್ತದೆ. ದೇಹಕ್ಕೆ ಬೇಗನೆ ಶಕ್ತಿಯನ್ನು ತುಂಬುವುದು.

2. ದಿನವೂ ಖರ್ಜೂರ ತಿಂದರೆ ಹೊಟ್ಟೆಯಲ್ಲಿ ಆರೋಗ್ಯಕರವಾದ ಬ್ಯಾಕ್ಟೀರಿಯವನ್ನು ಹೆಚ್ಚು ಉತ್ಪತ್ತಿ ಮಾಡುವುದರಿಂದ ಕರಳಿನ ಕಾರ್ಯಕ್ಕೆ ಸಹಾಯಮಾಡುತ್ತದೆ.

3. ಖರ್ಜೂರ ತಿನ್ನುವುದರಿಂದ ಕ್ಯಾನ್ಸರ್ ರಕ್ತ ಕಣಗಳು ಹರಡುವುದನ್ನು ತಡೆಗಟ್ಟಬಹುದು.

4. ಖರ್ಜೂರವನ್ನು ರಾತ್ರಿಯಲ್ಲಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಅದನ್ನು ಜ್ಯೂಸ್ ರೀತಿ ಮಾಡಿ ಕುಡಿಯುವುದು ಹೃದಯ ಸಮಸ್ಯೆ ಇರುವವರಿಗೆ ಒಳ್ಳೆಯದು.

5. ಖರ್ಜೂರದಲ್ಲಿ ಕಬ್ಬಿಣದಂಶ ಇರುವುದರಿಂದ ರಕ್ತಹೀನತೆಯನ್ನು ತಡೆಗಟ್ಟಬಹುದು.

6. ಅಸಿಡಿಟಿ ಮತ್ತು ಹೃದಯದ ಉರಿ ಕಡಿಮೆಯಾಗಲು ಖರ್ಜೂರ ಸಹಾಯಮಾಡುತ್ತದೆ.

7. ಹೆರಿಗೆಯ ನಂತರ ಎದೆಯಲ್ಲಿ ಹಾಲು ಹೆಚ್ಚು ಉತ್ಪತ್ತಿ ಮಾಡುತ್ತದೆ.

8. ಖರ್ಜೂರ ಹಾಕಿ ಕಾಯಿಸಿದ ಹಾಲು ಮಕ್ಕಳಿಗೆ ಅತ್ಯುತ್ತಮವಾದ ಪೋಷಕಾಂಶವಾಗಿದೆ.

ತುಳಸಿ ಎಂಬ ಪ್ರಾಚೀನ ಆಂಟಿ ವೈರಸ್

                   ತುಳಸಿ ಎಂಬ ಪ್ರಾಚೀನ ಆಂಟಿ ವೈರಸ್

ತುಳಸಿ ಅಥವಾ ತುಲಸಿ ಎಂಬ ಪದಕ್ಕೆ ಅಪ್ರತಿಮ, ಅದ್ವೀತಿಯ ಎಂಬ ಅರ್ಥ ಉಂಟು. ದೇವಾಲಯಗಳಲ್ಲಿ, ಯಾತ್ರಾಸ್ಥಳಗಳಲ್ಲಿ ಹೆಚ್ಚಾಗಿ ಕಾಣ ಸಿಗುವ ತುಳಸಿ, ಸಂಪ್ರದಾಯಸ್ಥ ಹಿಂದೂ ಕುಟುಂಬದ ಖಾಯಂ ಸದಸ್ಯೆ.


ಪವಿತ್ರ ತುಳಸಿ ಕಟ್ಟೆಗೆ ನಿತ್ಯ ಪೂಜೆ ನಡೆಯುವುದು ಮಾಮೂಲಿಯಾದರೂ ದೀಪಾವಳಿ ವೇಳೆಗೆ ತುಳಸಿಗೆ ಮದುಮಗಳ ಸಿಂಗಾರ ಸಿಗುತ್ತದೆ. ಅದು ಹಾಗಿರಲಿ, ತುಳಸಿ ನಮ್ಮ ಆರೋಗ್ಯಕ್ಕೆ ಹೇಗೆ ನೆರವಾಗುತ್ತಾಳೆ ನೋಡೋಣ.


ತುಳಸಿಗೆ ಒತ್ತಡ ನಿವಾರಕ ಗುಣವಿದೆ. ಹಿಂದೆಲ್ಲಾ ದೂರದ ಊರಿನಿಂದ ಬರುವ ಯಾತ್ರಿಕರು ತುಳಸಿ ಎಲೆಯನ್ನು ಜಗಿದು ಪ್ರಯಾಣದ ಆಯಾಸವನ್ನು ನೀಗಿಸಿಕೊಂಡು ಸಾಗುತ್ತಿದ್ದರಂತೆ.


ಪ್ರಮುಖವಾಗಿ ಎರಡು ವಿಧಗಳಲ್ಲಿ ಸಿಗುತ್ತದೆ. ಒಂದು ಕೃಷ್ಣ ತುಳಸಿ(ಕಪ್ಪಗಿನದು) ಇನ್ನೊಂದು ಶ್ರೀ ತುಳಸಿ(ಬಿಳಿಯ ವರ್ಣದ್ದು). ಒತ್ತಡ ನಿವಾರಣೆ ಜತೆಗೆ ಇದು ಅತ್ಯುತ್ತಮ ವೈರಾಣು ರಕ್ಷಕ(anti -virus). ತುಳಸಿಯ anti -virus ಗುಣದ ಬಲದಿಂದ ವಿಷಮ ಶೀತ ಜ್ವರ(viral fever), ಮಲೇರಿಯಾದಂತಹ ಕಾಯಿಲೆಯನ್ನು ಹೋಗಲಾಡಿಸಬಹುದು.


ತುಳಸಿಯ ಸಾಮಾನ್ಯ ಉಪಯೋಗಗಳು:


* ಜ್ವರಕ್ಕೆ: ಚೆನ್ನಾಗಿ ಅರೆದ ತುಳಸಿಯನ್ನು ಬಟ್ಟೆಯಲ್ಲಿ ಸೋಸಬೇಕು. ತುಳಸಿ ರಸವನ್ನು 1-2 ಟೀ ಚಮಚ(ಮಕ್ಕಳಿಗೆ) ಅಥವಾ 2-4 ಟೀ ಚಮಚ(ದೊಡ್ಡವರಿಗೆ) ಜೇನಿನೊಂದಿಗೆ ದಿನಕ್ಕೆ 2 ರಿಂದ 3 ಬಾರಿನೀಡಬಹುದು.


* ತುಳಸಿ ರಸವನ್ನು ಶ್ವಾಸಕೋಶಗಳ ಸೋಂಕು, ಕೆಮ್ಮು, ನೆಗಡಿ ಹೋಗಲಾಡಿಸಲು ಸೇವಿಸಬಹುದು.


* ಜೇಡ ಕಚ್ಚಿದರೆ ತುಳಸಿ ರಸಕ್ಕೆ ಅರಿಶಿನವನ್ನು ಬೆರೆಸಿ ಜೇಡ ಕಚ್ಚಿದ ಸ್ಥಳದ ಮೇಲೆ ಹಚ್ಚಬೇಕು. ಹಾಗೂ ಸೇವಿಸಬೇಕು.


* ಕೆಂಡದಲ್ಲಿ ಬಾಡಿಸಿದ ತುಳಸಿಯನ್ನು ಬಟ್ಟೆಯಲ್ಲಿ ಕಟ್ಟಿ ನಾಸಿಕದ ಬಳಿ ಹಿಡಿದುಕೊಂಡು ಉಸಿರನ್ನು ಒಳಗೆ ಎಳೆದುಕೊಂಡರೆ, ಕಟ್ಟಿದ ನಾಸಿಕ ಸಡಿಲವಾಗಿ ಶೀತ ಮಾಯವಾಗುತ್ತದೆ.


* ತುಳಸಿರಸ ಹಾಗೂ ಜೇನುತುಪ್ಪವನ್ನು ತಲಾ 3 ಮಿ.ಗ್ರಾಂನಷ್ಟು ಕಲೆಸಿ ಸೇವಿಸಿದರೆ ಜೀರ್ಣಶಕ್ತಿ ಹೆಚ್ಚುತ್ತದೆ.


* ತುಳಸಿ, ಮೆಣಸು, ಒಣಶುಂಠಿ ಮತ್ತು ಇದ್ದಿಲನ್ನು ಪುಡಿಮಾಡಿ ಕಷಾಯಮಾಡಿ ಕುಡಿದರೆ ನೆಗಡಿ ಗುಣವಾಗುತ್ತದೆ.


* ಮನೆಯಂಗಳದಲ್ಲಿ ತುಳಸಿ ಬೆಳೆಸುವುದರಿಂದ ವಾತಾವರಣ ಸೂಕ್ಷ್ಮಾಣು ಜೀವಿಗಳ ತೊಂದರೆಯಿಂದ ಮುಕ್ತವಾಗುತ್ತದೆ. ಮಾನವನ ದೇಹಕ್ಕೆ ಅಗತ್ಯವಾದ ಆಮ್ಲಜನಕ ಯಥೇಚ್ಛವಾಗಿ ಸಿಗುತ್ತದೆ.


* ತುಳಸಿ ಕಷಾಯವನ್ನು ಮಾಡಿ ಹಾಲು ಮತ್ತು ಸಕ್ಕರೆಯನ್ನು ಬೆರೆಸಿ ಕುಡಿಯುತ್ತ ಬಂದರೆ ದೇಹ ಸದೃಢವಾಗುತ್ತದೆ.ದೇಹದ ಕಾಂತಿ ಹೆಚ್ಚುತ್ತದೆ.


* ಕುಡಿಯುವ ನೀರಿನ ಪಾತ್ರೆಗೆ ನಾಲ್ಕಾರು ತುಳಸಿ ದಳಗಳನು ಹಾಕುವುದರಿಂದ ನೀರಿನ ಶುದ್ಧತೆ ಹೆಚ್ಚಿ, ಸೇವಿಸಲು ಉತ್ತಮವಾಗುತ್ತದೆ.


* ತುಳಸಿ ಎಲೆಯ ರಸವನ್ನು ಕಾಲುಭಾಗ ಎಣ್ಣೆಯಲ್ಲಿ ಕಾಯಿಸಿ ತಲೆಗೆ ಹಚ್ಚಲು ತಲೆಯಲ್ಲಿ ಹೇನು, ಹೊಟ್ಟು ಬರುವಿಕೆ ನಿವಾರಣೆಯಾಗುತ್ತದೆ.


* ಚರ್ಮದ ಸೋಂಕು ನಿವಾರಣೆಗೂ ತುಳಸಿ ದಳ ಪ್ರಯೋಜನಕಾರಿ. ಸ್ನಾನದ ನೀರಿಗೆ ಕೆಲವು ತುಳಸಿ ದಳಗಳನ್ನು ಹಾಕಿ ಕೆಲ ನಿಮಿಷಗಳ ಕಾಲ ಬಿಟ್ಟು ನಂತರ ಸ್ನಾನ ಮಾಡಿದರೆ, ಚರ್ಮ ಮೃದುವಾಗುವುದಲ್ಲದೆ, ರೋಗಮುಕ್ತವಾಗುತ್ತದೆ.


* ಚರ್ಮದ ತುರಿಕೆ, ಇಸುಬು, ಫಂಗಸ್ ಗಳ ಉಪಶಮನಕ್ಕೆ ತುಳಸಿ ಬಳಕೆ ಸಾಮಾನ್ಯ.


* ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸುವುದರಿಂದ ದೀರ್ಘಾಯುಸ್ಯ ಹೊಂದ ಬಯಸುವವರು ತುಳಸಿ ಜಗಿಯಬಹುದು.


ಪವಿತ್ರ ತುಳಸಿ ವೈದ್ಯ ತುಳಸಿ ಎಲ್ಲರಿಗೂ ತಿಳಿಸಿ


ಪವಿತ್ರ ತುಳಸಿ ಮತ್ತು ಚಿಕಿತ್ಸಕ ಗುಣಗಳ ಗಣಿ ತುಳಸಿ. ಹಲವುದಳ ಶ್ರೀತುಳಸಿ ಸೇವನೆ ಹಂದಿಜ್ವರ ನಿವಾರಣೆಗೆ ರಾಮಬಾಣ ಎನ್ನುತ್ತದೆ ಆಯುರ್ವೇದ. ಎಚ್1ಎನ್1 ರೋಗಾಣುಗಳು ತಾಗದಂತೆ ತುಳಸಿ ನಮ್ಮನ್ನು ರಕ್ಷಿಸುವುದಷ್ಟೆ ಅಲ್ಲ, ರೋಗವನ್ನು ಶೀಘ್ರವಾಗಿ ಹೋಗಲಾಡಿಸಿ ಗುಣ ಮುಖಮಾಡುತ್ತದೆ ಎಂದು ಆಯುರ್ವೇದ ವೈದ್ಯರು ಹೇಳುತ್ತಾರೆ.


ಫ್ಲು ಬಾಧೆಯನ್ನು ಹತ್ತಿಕ್ಕುವ ಗುಣ ತುಳಸಿಯಲ್ಲಿದೆ ಎಂದು ವೈದ್ಯಕೀಯ ತಜ್ಞರು ಇತ್ತೀಚೆಗೆ ಕಂಡುಕೊಂಡಿದ್ದಾರೆ. ಪ್ರಪಂಚದ ನಾನಾ ಕಡೆ ಆಯುರ್ವೇದ ಅಭ್ಯಾಸ ಮಾಡುವ ವೈದ್ಯರು ಇದೇ ಅಭಿಪ್ರಾಯ ತಳೆದಿದ್ದಾರೆ. ತುಳಸಿ ದೇಹದಲ್ಲಿನ ರೋಗನಿರೋಧಕ ಗುಣವನ್ನು ವೃದ್ಧಿಸುವುದಲ್ಲದೆ ಮೈಮೇಲೆ ಎರಗುವ ವೈರಾಣುಗಳ ವಿರುದ್ಧ ಯಶಸ್ವಿ ಸಮರ ಸಾರುವ ಶಕ್ತಿ ಹೊಂದಿರುತ್ತದೆ. ಜಪಾನಿನಲ್ಲಿ ಹಬ್ಬಿದ್ದ ಎನ್ ಸಿಫಾಲಿಟಿಸ್ ರೋಗವನ್ನು ತಡೆಯಲು ತುಳಸಿಯನ್ನು ಬಳಸಲಾಗಿತ್ತು. ತುಳಸಿಯ ಈ ಚಿಕಿತ್ಸಕ ಗುಣವನ್ನು ಹಂದಿಜ್ವರ ನಿವಾರಣೆಗೂ ಬಳಸಬಹುದು ಎಂದು ಗಿಡಮೂಲಿಕೆಗಳ ಖ್ಯಾತ ವೈದ್ಯ ಡಾ. ಯು.ಕೆ. ತಿವಾರಿ ಹೇಳುತ್ತಾರೆ.


ತುಳಸಿ ಎಲೆಗಳು ಹಂದಿಜ್ವರ ವೈರಾಣು ರೋಗ ಬಾರದಂತೆ ರಕ್ಷಿಸಬಲ್ಲದು ಮತ್ತು ರೋಗಪೀಡೀತರು ಶೀಘ್ರ ಗುಣಮುಖರಾಗುವಂತೆ ನೆರವಾಗಬಲ್ಲುದು ಎಂದು ತಿವಾರಿ ಹೇಳಿದ್ದಾರೆ. ಹಂದಿಜ್ವರ ತಡೆಯುವುದರಲ್ಲಿ ತುಳಸಿಯ ಪಾತ್ರ ಹಿರಿಯದಾದದ್ದು ಎಂದು ಹೇಳುತ್ತಾರೆ ಇನ್ನೊಬ್ಬ ವೈದ್ಯ ಡಾ. ಭೂಪೇಶ್ ಪಟೇಲ್. ಜಾಮ್ ನಗರದಲ್ಲಿರುವ ಗುಜರಾತ್ ಆಯುರ್ವೇದ ವಿಶ್ವವಿದ್ಯಾಲದಲ್ಲಿ ಭೂಪೇಶ್ ಅವರು ಉಪನ್ಯಾಸಕಾರಿದ್ದಾರೆ.


ತುಳಸಿಗೆ ಸ್ವೈನ್ ಫ್ಲು ಹಿಮ್ಮೆಟ್ಟಿಸುವ ಶಕ್ತಿ ಇದೆ. ಆದ್ದರಿಂದ ನೀವು ಪ್ರತಿದಿನ 20ರಿಂದ 25ರಷ್ಟು ತಾಜಾ ತುಳಸಿ ಎಲೆಗಳನ್ನು ಖಾಲಿಹೊಟ್ಟೆ ಇದ್ದಾಗ ಸೇವಿಸಬೇಕು. ರೋಗ ನಿರೋಧಕ ಶಕ್ತಿಯನ್ನು ತುಳಸಿ ವೃದ್ಧಿಸುತ್ತದೆ ಹಾಗೂ ಹಂದಿಜ್ವರ ಹತ್ತಿರ ಸುಳಿಯದಂತೆ ಕಾಪಾಡುತ್ತದೆ ಎಂದು ಭೂಪೇಶ್ ಅಭಿಪ್ರಾಯಪಟ್ಟಿದ್ದಾರೆ. ಲಕ್ನೋದಲ್ಲಿರುವ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜಿನಲ್ಲಿ ವೃತ್ತಿಪರರಾಗಿ ಕೆಲಸಮಾಡಿದ್ದ ಡಾ. ನರೇಂದ್ರ ಸಿಂಗ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಂದಿಜ್ವರಕ್ಕೆ ತುತ್ತಾಗಿರುವ ರೋಗಿಗಳು ತುಳಸಿಯನ್ನು ಯಾವರೀತಿ ಬಳಸಬೇಕು? ರೋಗದ ತೀವ್ರತೆ ಮತ್ತು ರೋಗಿಯ ಸ್ಥಿತಿ ತುಳಸಿ ಸೇವನೆಯ ಪ್ರಮಾಣವನ್ನು ನಿರ್ಧರಿಸುತ್ತದೆ ಎನ್ನುತ್ತಾರೆ ವೈದ್ಯರು.


ತುಳಸಿಯಲ್ಲಿ ಮೂರು ವಿಧ : ಕೃಷ್ಣ ತುಳಸಿ(Ocimum sanctum), ವನ ತುಳಸಿ(Ocimum gratissimum), ಕಟುಕಿ ತುಳಸಿ(Picrorriza kurroa). ಈ ಮೂರೂ ಬಗೆಯ ತುಳಸಿಯಲ್ಲಿ ರೋಗ ನಿರೋಧಕ ಶಕ್ತಿ ಉಂಟು. ರೋಗವನ್ನು ಹಿಮ್ಮೆಟ್ಟಿಸುವ ಶಕ್ತಿಯೂ ಉಂಟು. ತುಳಸಿ ಸೇವನೆಯಿಂದ ಯಾವುದೇ ಬಗೆಯ ಅಡ್ಡ ಪರಿಣಾಮಗಳು ಇರುವುದಿಲ್ಲ. ಇತರ ಔಷಧಗಳನ್ನು ಸೇವಿಸುವಂಥ ಸಮಯದಲ್ಲೂ ತುಳಸಿಯನ್ನು ಧಾರಾಳವಾಗಿ ತಿನ್ನಬಹುದು ಎಂದು ಮೇಲೆ ಪ್ರಸ್ತಾಪಿಸಿದ ಪ್ರತಿಯೊಬ್ಬ ವೈದ್ಯರೂ ಹೇಳಿದ್ದಾರೆ.