Tuesday, April 3, 2012

ತುಳಸಿ ಎಂಬ ಪ್ರಾಚೀನ ಆಂಟಿ ವೈರಸ್

                   ತುಳಸಿ ಎಂಬ ಪ್ರಾಚೀನ ಆಂಟಿ ವೈರಸ್

ತುಳಸಿ ಅಥವಾ ತುಲಸಿ ಎಂಬ ಪದಕ್ಕೆ ಅಪ್ರತಿಮ, ಅದ್ವೀತಿಯ ಎಂಬ ಅರ್ಥ ಉಂಟು. ದೇವಾಲಯಗಳಲ್ಲಿ, ಯಾತ್ರಾಸ್ಥಳಗಳಲ್ಲಿ ಹೆಚ್ಚಾಗಿ ಕಾಣ ಸಿಗುವ ತುಳಸಿ, ಸಂಪ್ರದಾಯಸ್ಥ ಹಿಂದೂ ಕುಟುಂಬದ ಖಾಯಂ ಸದಸ್ಯೆ.


ಪವಿತ್ರ ತುಳಸಿ ಕಟ್ಟೆಗೆ ನಿತ್ಯ ಪೂಜೆ ನಡೆಯುವುದು ಮಾಮೂಲಿಯಾದರೂ ದೀಪಾವಳಿ ವೇಳೆಗೆ ತುಳಸಿಗೆ ಮದುಮಗಳ ಸಿಂಗಾರ ಸಿಗುತ್ತದೆ. ಅದು ಹಾಗಿರಲಿ, ತುಳಸಿ ನಮ್ಮ ಆರೋಗ್ಯಕ್ಕೆ ಹೇಗೆ ನೆರವಾಗುತ್ತಾಳೆ ನೋಡೋಣ.


ತುಳಸಿಗೆ ಒತ್ತಡ ನಿವಾರಕ ಗುಣವಿದೆ. ಹಿಂದೆಲ್ಲಾ ದೂರದ ಊರಿನಿಂದ ಬರುವ ಯಾತ್ರಿಕರು ತುಳಸಿ ಎಲೆಯನ್ನು ಜಗಿದು ಪ್ರಯಾಣದ ಆಯಾಸವನ್ನು ನೀಗಿಸಿಕೊಂಡು ಸಾಗುತ್ತಿದ್ದರಂತೆ.


ಪ್ರಮುಖವಾಗಿ ಎರಡು ವಿಧಗಳಲ್ಲಿ ಸಿಗುತ್ತದೆ. ಒಂದು ಕೃಷ್ಣ ತುಳಸಿ(ಕಪ್ಪಗಿನದು) ಇನ್ನೊಂದು ಶ್ರೀ ತುಳಸಿ(ಬಿಳಿಯ ವರ್ಣದ್ದು). ಒತ್ತಡ ನಿವಾರಣೆ ಜತೆಗೆ ಇದು ಅತ್ಯುತ್ತಮ ವೈರಾಣು ರಕ್ಷಕ(anti -virus). ತುಳಸಿಯ anti -virus ಗುಣದ ಬಲದಿಂದ ವಿಷಮ ಶೀತ ಜ್ವರ(viral fever), ಮಲೇರಿಯಾದಂತಹ ಕಾಯಿಲೆಯನ್ನು ಹೋಗಲಾಡಿಸಬಹುದು.


ತುಳಸಿಯ ಸಾಮಾನ್ಯ ಉಪಯೋಗಗಳು:


* ಜ್ವರಕ್ಕೆ: ಚೆನ್ನಾಗಿ ಅರೆದ ತುಳಸಿಯನ್ನು ಬಟ್ಟೆಯಲ್ಲಿ ಸೋಸಬೇಕು. ತುಳಸಿ ರಸವನ್ನು 1-2 ಟೀ ಚಮಚ(ಮಕ್ಕಳಿಗೆ) ಅಥವಾ 2-4 ಟೀ ಚಮಚ(ದೊಡ್ಡವರಿಗೆ) ಜೇನಿನೊಂದಿಗೆ ದಿನಕ್ಕೆ 2 ರಿಂದ 3 ಬಾರಿನೀಡಬಹುದು.


* ತುಳಸಿ ರಸವನ್ನು ಶ್ವಾಸಕೋಶಗಳ ಸೋಂಕು, ಕೆಮ್ಮು, ನೆಗಡಿ ಹೋಗಲಾಡಿಸಲು ಸೇವಿಸಬಹುದು.


* ಜೇಡ ಕಚ್ಚಿದರೆ ತುಳಸಿ ರಸಕ್ಕೆ ಅರಿಶಿನವನ್ನು ಬೆರೆಸಿ ಜೇಡ ಕಚ್ಚಿದ ಸ್ಥಳದ ಮೇಲೆ ಹಚ್ಚಬೇಕು. ಹಾಗೂ ಸೇವಿಸಬೇಕು.


* ಕೆಂಡದಲ್ಲಿ ಬಾಡಿಸಿದ ತುಳಸಿಯನ್ನು ಬಟ್ಟೆಯಲ್ಲಿ ಕಟ್ಟಿ ನಾಸಿಕದ ಬಳಿ ಹಿಡಿದುಕೊಂಡು ಉಸಿರನ್ನು ಒಳಗೆ ಎಳೆದುಕೊಂಡರೆ, ಕಟ್ಟಿದ ನಾಸಿಕ ಸಡಿಲವಾಗಿ ಶೀತ ಮಾಯವಾಗುತ್ತದೆ.


* ತುಳಸಿರಸ ಹಾಗೂ ಜೇನುತುಪ್ಪವನ್ನು ತಲಾ 3 ಮಿ.ಗ್ರಾಂನಷ್ಟು ಕಲೆಸಿ ಸೇವಿಸಿದರೆ ಜೀರ್ಣಶಕ್ತಿ ಹೆಚ್ಚುತ್ತದೆ.


* ತುಳಸಿ, ಮೆಣಸು, ಒಣಶುಂಠಿ ಮತ್ತು ಇದ್ದಿಲನ್ನು ಪುಡಿಮಾಡಿ ಕಷಾಯಮಾಡಿ ಕುಡಿದರೆ ನೆಗಡಿ ಗುಣವಾಗುತ್ತದೆ.


* ಮನೆಯಂಗಳದಲ್ಲಿ ತುಳಸಿ ಬೆಳೆಸುವುದರಿಂದ ವಾತಾವರಣ ಸೂಕ್ಷ್ಮಾಣು ಜೀವಿಗಳ ತೊಂದರೆಯಿಂದ ಮುಕ್ತವಾಗುತ್ತದೆ. ಮಾನವನ ದೇಹಕ್ಕೆ ಅಗತ್ಯವಾದ ಆಮ್ಲಜನಕ ಯಥೇಚ್ಛವಾಗಿ ಸಿಗುತ್ತದೆ.


* ತುಳಸಿ ಕಷಾಯವನ್ನು ಮಾಡಿ ಹಾಲು ಮತ್ತು ಸಕ್ಕರೆಯನ್ನು ಬೆರೆಸಿ ಕುಡಿಯುತ್ತ ಬಂದರೆ ದೇಹ ಸದೃಢವಾಗುತ್ತದೆ.ದೇಹದ ಕಾಂತಿ ಹೆಚ್ಚುತ್ತದೆ.


* ಕುಡಿಯುವ ನೀರಿನ ಪಾತ್ರೆಗೆ ನಾಲ್ಕಾರು ತುಳಸಿ ದಳಗಳನು ಹಾಕುವುದರಿಂದ ನೀರಿನ ಶುದ್ಧತೆ ಹೆಚ್ಚಿ, ಸೇವಿಸಲು ಉತ್ತಮವಾಗುತ್ತದೆ.


* ತುಳಸಿ ಎಲೆಯ ರಸವನ್ನು ಕಾಲುಭಾಗ ಎಣ್ಣೆಯಲ್ಲಿ ಕಾಯಿಸಿ ತಲೆಗೆ ಹಚ್ಚಲು ತಲೆಯಲ್ಲಿ ಹೇನು, ಹೊಟ್ಟು ಬರುವಿಕೆ ನಿವಾರಣೆಯಾಗುತ್ತದೆ.


* ಚರ್ಮದ ಸೋಂಕು ನಿವಾರಣೆಗೂ ತುಳಸಿ ದಳ ಪ್ರಯೋಜನಕಾರಿ. ಸ್ನಾನದ ನೀರಿಗೆ ಕೆಲವು ತುಳಸಿ ದಳಗಳನ್ನು ಹಾಕಿ ಕೆಲ ನಿಮಿಷಗಳ ಕಾಲ ಬಿಟ್ಟು ನಂತರ ಸ್ನಾನ ಮಾಡಿದರೆ, ಚರ್ಮ ಮೃದುವಾಗುವುದಲ್ಲದೆ, ರೋಗಮುಕ್ತವಾಗುತ್ತದೆ.


* ಚರ್ಮದ ತುರಿಕೆ, ಇಸುಬು, ಫಂಗಸ್ ಗಳ ಉಪಶಮನಕ್ಕೆ ತುಳಸಿ ಬಳಕೆ ಸಾಮಾನ್ಯ.


* ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸುವುದರಿಂದ ದೀರ್ಘಾಯುಸ್ಯ ಹೊಂದ ಬಯಸುವವರು ತುಳಸಿ ಜಗಿಯಬಹುದು.


ಪವಿತ್ರ ತುಳಸಿ ವೈದ್ಯ ತುಳಸಿ ಎಲ್ಲರಿಗೂ ತಿಳಿಸಿ


ಪವಿತ್ರ ತುಳಸಿ ಮತ್ತು ಚಿಕಿತ್ಸಕ ಗುಣಗಳ ಗಣಿ ತುಳಸಿ. ಹಲವುದಳ ಶ್ರೀತುಳಸಿ ಸೇವನೆ ಹಂದಿಜ್ವರ ನಿವಾರಣೆಗೆ ರಾಮಬಾಣ ಎನ್ನುತ್ತದೆ ಆಯುರ್ವೇದ. ಎಚ್1ಎನ್1 ರೋಗಾಣುಗಳು ತಾಗದಂತೆ ತುಳಸಿ ನಮ್ಮನ್ನು ರಕ್ಷಿಸುವುದಷ್ಟೆ ಅಲ್ಲ, ರೋಗವನ್ನು ಶೀಘ್ರವಾಗಿ ಹೋಗಲಾಡಿಸಿ ಗುಣ ಮುಖಮಾಡುತ್ತದೆ ಎಂದು ಆಯುರ್ವೇದ ವೈದ್ಯರು ಹೇಳುತ್ತಾರೆ.


ಫ್ಲು ಬಾಧೆಯನ್ನು ಹತ್ತಿಕ್ಕುವ ಗುಣ ತುಳಸಿಯಲ್ಲಿದೆ ಎಂದು ವೈದ್ಯಕೀಯ ತಜ್ಞರು ಇತ್ತೀಚೆಗೆ ಕಂಡುಕೊಂಡಿದ್ದಾರೆ. ಪ್ರಪಂಚದ ನಾನಾ ಕಡೆ ಆಯುರ್ವೇದ ಅಭ್ಯಾಸ ಮಾಡುವ ವೈದ್ಯರು ಇದೇ ಅಭಿಪ್ರಾಯ ತಳೆದಿದ್ದಾರೆ. ತುಳಸಿ ದೇಹದಲ್ಲಿನ ರೋಗನಿರೋಧಕ ಗುಣವನ್ನು ವೃದ್ಧಿಸುವುದಲ್ಲದೆ ಮೈಮೇಲೆ ಎರಗುವ ವೈರಾಣುಗಳ ವಿರುದ್ಧ ಯಶಸ್ವಿ ಸಮರ ಸಾರುವ ಶಕ್ತಿ ಹೊಂದಿರುತ್ತದೆ. ಜಪಾನಿನಲ್ಲಿ ಹಬ್ಬಿದ್ದ ಎನ್ ಸಿಫಾಲಿಟಿಸ್ ರೋಗವನ್ನು ತಡೆಯಲು ತುಳಸಿಯನ್ನು ಬಳಸಲಾಗಿತ್ತು. ತುಳಸಿಯ ಈ ಚಿಕಿತ್ಸಕ ಗುಣವನ್ನು ಹಂದಿಜ್ವರ ನಿವಾರಣೆಗೂ ಬಳಸಬಹುದು ಎಂದು ಗಿಡಮೂಲಿಕೆಗಳ ಖ್ಯಾತ ವೈದ್ಯ ಡಾ. ಯು.ಕೆ. ತಿವಾರಿ ಹೇಳುತ್ತಾರೆ.


ತುಳಸಿ ಎಲೆಗಳು ಹಂದಿಜ್ವರ ವೈರಾಣು ರೋಗ ಬಾರದಂತೆ ರಕ್ಷಿಸಬಲ್ಲದು ಮತ್ತು ರೋಗಪೀಡೀತರು ಶೀಘ್ರ ಗುಣಮುಖರಾಗುವಂತೆ ನೆರವಾಗಬಲ್ಲುದು ಎಂದು ತಿವಾರಿ ಹೇಳಿದ್ದಾರೆ. ಹಂದಿಜ್ವರ ತಡೆಯುವುದರಲ್ಲಿ ತುಳಸಿಯ ಪಾತ್ರ ಹಿರಿಯದಾದದ್ದು ಎಂದು ಹೇಳುತ್ತಾರೆ ಇನ್ನೊಬ್ಬ ವೈದ್ಯ ಡಾ. ಭೂಪೇಶ್ ಪಟೇಲ್. ಜಾಮ್ ನಗರದಲ್ಲಿರುವ ಗುಜರಾತ್ ಆಯುರ್ವೇದ ವಿಶ್ವವಿದ್ಯಾಲದಲ್ಲಿ ಭೂಪೇಶ್ ಅವರು ಉಪನ್ಯಾಸಕಾರಿದ್ದಾರೆ.


ತುಳಸಿಗೆ ಸ್ವೈನ್ ಫ್ಲು ಹಿಮ್ಮೆಟ್ಟಿಸುವ ಶಕ್ತಿ ಇದೆ. ಆದ್ದರಿಂದ ನೀವು ಪ್ರತಿದಿನ 20ರಿಂದ 25ರಷ್ಟು ತಾಜಾ ತುಳಸಿ ಎಲೆಗಳನ್ನು ಖಾಲಿಹೊಟ್ಟೆ ಇದ್ದಾಗ ಸೇವಿಸಬೇಕು. ರೋಗ ನಿರೋಧಕ ಶಕ್ತಿಯನ್ನು ತುಳಸಿ ವೃದ್ಧಿಸುತ್ತದೆ ಹಾಗೂ ಹಂದಿಜ್ವರ ಹತ್ತಿರ ಸುಳಿಯದಂತೆ ಕಾಪಾಡುತ್ತದೆ ಎಂದು ಭೂಪೇಶ್ ಅಭಿಪ್ರಾಯಪಟ್ಟಿದ್ದಾರೆ. ಲಕ್ನೋದಲ್ಲಿರುವ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜಿನಲ್ಲಿ ವೃತ್ತಿಪರರಾಗಿ ಕೆಲಸಮಾಡಿದ್ದ ಡಾ. ನರೇಂದ್ರ ಸಿಂಗ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಂದಿಜ್ವರಕ್ಕೆ ತುತ್ತಾಗಿರುವ ರೋಗಿಗಳು ತುಳಸಿಯನ್ನು ಯಾವರೀತಿ ಬಳಸಬೇಕು? ರೋಗದ ತೀವ್ರತೆ ಮತ್ತು ರೋಗಿಯ ಸ್ಥಿತಿ ತುಳಸಿ ಸೇವನೆಯ ಪ್ರಮಾಣವನ್ನು ನಿರ್ಧರಿಸುತ್ತದೆ ಎನ್ನುತ್ತಾರೆ ವೈದ್ಯರು.


ತುಳಸಿಯಲ್ಲಿ ಮೂರು ವಿಧ : ಕೃಷ್ಣ ತುಳಸಿ(Ocimum sanctum), ವನ ತುಳಸಿ(Ocimum gratissimum), ಕಟುಕಿ ತುಳಸಿ(Picrorriza kurroa). ಈ ಮೂರೂ ಬಗೆಯ ತುಳಸಿಯಲ್ಲಿ ರೋಗ ನಿರೋಧಕ ಶಕ್ತಿ ಉಂಟು. ರೋಗವನ್ನು ಹಿಮ್ಮೆಟ್ಟಿಸುವ ಶಕ್ತಿಯೂ ಉಂಟು. ತುಳಸಿ ಸೇವನೆಯಿಂದ ಯಾವುದೇ ಬಗೆಯ ಅಡ್ಡ ಪರಿಣಾಮಗಳು ಇರುವುದಿಲ್ಲ. ಇತರ ಔಷಧಗಳನ್ನು ಸೇವಿಸುವಂಥ ಸಮಯದಲ್ಲೂ ತುಳಸಿಯನ್ನು ಧಾರಾಳವಾಗಿ ತಿನ್ನಬಹುದು ಎಂದು ಮೇಲೆ ಪ್ರಸ್ತಾಪಿಸಿದ ಪ್ರತಿಯೊಬ್ಬ ವೈದ್ಯರೂ ಹೇಳಿದ್ದಾರೆ.

No comments:

Post a Comment