Tuesday, April 3, 2012

ಉತ್ತಮ ಆರೋಗ್ಯಕ್ಕಾಗಿ ಆಯುರ್ವೇದ ತಾಣ

ayurveda
ಒಂದು ಕಡೆ ಆಯುರ್ವೇದವೆಂದರೆ ಬರಿಯ ಗಿಡಮೂಲಿಕೆಯ ಪುಡಿವೈದ್ಯ ಅಥವಾ ಬರಿಯ ಮಾಲೀಶ್ (massage) ಚಿಕಿತ್ಸೆ ಎಂದೆಲ್ಲ ತಪ್ಪು ಕಲ್ಪನೆಗಳಿದ್ದರೆ ಇನ್ನೊಂದು ಕಡೆ ಆಯುರ್ವೇದದ ಬಗ್ಗೆ ನಿಜವಾದ ಆಸಕ್ತಿ, ಕುತೂಹಲ, ಅರಿವು ಉಂಟಾಗುತ್ತಿದೆ. ಇಂತಹ ಪರ್ವಕಾಲದಲ್ಲಿ ಕನ್ನಡಿಗರಿಗೆ ಆಯುರ್ವೇದದ ಪರಿಚಯ ಹಾಗೂ ತಿಳುವಳಿಕೆ ನೀಡುವ ಉದ್ದೇಶದಿಂದ ಈ ತಾಣವನ್ನು ಆರಂಭಿಸಿದ್ದೇನೆ.
ಆಯುಷ್ಕಾಮೀಯವೆಂಬುದು ಆಚಾರ್ಯ ವಾಗ್ಭಟರ ಆಯುರ್ವೇದ ಗ್ರಂಥದ ಮೊದಲ ಅಧ್ಯಾಯದ ಹೆಸರು. ಉತ್ತಮ ಆರೋಗ್ಯದಿಂದ ಕೂಡಿದ ಪರಿಪೂರ್ಣ ಮತ್ತು ದೀರ್ಘ (?) “ಆಯುಸ್ಸನ್ನು ಬಯಸುವವರಿಗಾಗಿ” ಎಂಬುದು ಇದರ ಅರ್ಥ.
ಕಾಲಕಾಲಕ್ಕೆ ಆಯುರ್ವೇದ ವಿಚಾರಗಳನ್ನು ಲೇಖನ, ಚಿತ್ರ, ದೃಶ್ಯಾವಳಿಗಳು ಮುಂತಾದವುಗಳಿಂದ ಪ್ರಸ್ತುತಪಡಿಸಲಿದ್ದೇನೆ.
ಸ್ನೇಹಿತರೇ, ಬನ್ನಿ, ಬರುತ್ತಿರಿ.
ಧನ್ಯವಾದಗಳು

ಮುನ್ನುಡಿ

ಆರೋಗ್ಯ, ಯಾರಿಗೆ ಬೇಡ? ಅದರಲ್ಲೂ ಉತ್ತಮ ಆರೋಗ್ಯ! ಅದಕ್ಕಾಗಿ ಈ ಒಂದು ಪ್ರಯತ್ನ, ಎಲ್ಲರಿಗಾಗಿ, ಎಲ್ಲರ ಒಳಿತಿಗಾಗಿ.
ಉತ್ತಮ ಆರೋಗ್ಯ ಎಂದರೆ ಏನು? ಖಾಯಿಲೆಗಳಿಲ್ಲದಿರುವುದು ಅಷ್ಟೆಯೇ? ಅದು ಆರೋಗ್ಯದ ಒಂದು ಭಾಗವಷ್ಟೇ. ಆಯುರ್ವೇದದಲ್ಲಿ “ದೋಷ, ಅಗ್ನಿ, ಧಾತು, ಮಲ ಮತ್ತು ಎಲ್ಲ ಕ್ರಿಯೆಗಳ ಸಾಮ್ಯತೆಯೊಡನೆ ಪ್ರಸನ್ನವಾದ ಆತ್ಮಾ, ಇಂದ್ರಿಯಗಳು ಮತ್ತು ಮನಸ್ಸು ಇದ್ದರೆ ಅದನ್ನು ಸ್ವಾಸ್ಥ್ಯ” ಎಂದು ವಿವರಿಸಿದ್ದಾರೆ. ಇಲ್ಲಿ ಹೇಳಿದ ಪ್ರತಿಯೊಂದು ಅಂಶಗಳನ್ನೂ ಮುಂದಿನ ದಿನಗಳಲ್ಲಿ ವಿವರಿಸುತ್ತೇನೆ. ಏಕೆಂದರೆ ಇವುಗಳು ತುಂಬಾ ವಿಸ್ತಾರವಿರುವ ಮತ್ತು ಗಹನವಾದ ವಿಚಾರಗಳು.
ಆದರೂ ಸದ್ಯಕ್ಕೆ ಸುಲಭವಾಗಿ ಅರ್ಥವಾಗಲು ಹೇಳುವುದಾದರೆ “ಎಲ್ಲಾ ಶಾರೀರಿಕ ಮತ್ತು ಮಾನಸಿಕ ಕ್ರಿಯೆಗಳು ಸರಿಯಾಗಿ, ಕಾಲಕಾಲಕ್ಕೆ ಆಗುತ್ತಿದ್ದು, ಮನಸ್ಸು ಉಲ್ಲಸಿತವಾಗಿದ್ದು, ವಿವೇಚನೆ-ಬುದ್ಧಿಗಳು ಸರಿಯಾಗಿ ವರ್ತಿಸುತ್ತಿದ್ದರೆ ಅದು ಉತ್ತಮ ಆರೋಗ್ಯ” ಎನ್ನಬಹುದು. ಇಲ್ಲಿ ದೈಹಿಕ, ಮಾನಸಿಕ, ಆಧ್ಯಾತ್ಮಿಕ (ತನ್ನ ಬಗೆಗಿನ ಅರಿವು) ಹಾಗೂ ಸಾಮಾಜಿಕ (ತನ್ನ ಸುತ್ತಲಿನ ಪರಿವೆ ಹಾಗೂ ಅದಕ್ಕೆ ತಕ್ಕ ವರ್ತನೆ) ಆರೋಗ್ಯವೂ ಒಟ್ಟಾಗಿ ಹೇಳಲ್ಪಟ್ಟಿವೆ. ಹಾಗಾಗಿಯೇ ಆಯುರ್ವೇದವನ್ನು ’ಪರಿಪೂರ್ಣ ಚಿಕಿತ್ಸಾ ವಿಧಾನ’ ಎನ್ನಲಾಗಿದೆ.
ಮುಂದಿನ ಬರಹಗಳಲ್ಲಿ ಆಯುರ್ವೇದದಲ್ಲಿ ಹೇಳಿದ ಒಂದೊಂದೇ ವಿಚಾರಗಳನ್ನೂ ನನಗೆ ತಿಳಿದಷ್ಟು ವಿವರಿಸಲು ಪ್ರಯತ್ನಿಸುತ್ತೇನೆ. ನಿಮ್ಮ ಸಹಕಾರ, ಪ್ರೋತ್ಸಾಹ, ಸಲಹೆಗಳು ಇದನ್ನು ಇನ್ನೂ ಉತ್ತಮ ಪಡಿಸಲು ಸಹಾಯ ಮಾಡುತ್ತವೆ. ಅವನ್ನು ನಿಮ್ಮಿಂದ ಬಯಸಬಹುದಲ್ಲವೇ?

ಸೌತೆಕಾಯಿ

ಸೌತೆ ಕಾಯಿ ಸೇವನೆ ಆರೋಗ್ಯಕ್ಕೆ ಮತ್ತು ಸೌಂದರ್ಯಕ್ಕೆ ತುಂಬಾ ಒಳ್ಳೆಯದು.ಸೌತೆಕಾಯಿಂದ ಫೇಶಿಯಲ್  ಮಾಡಿ ಮುಖದಲ್ಲಿರುವ ಕಪ್ಪು ಕಲೆಯನ್ನು ಹೋಗಲಾಡಿಸಬಹುದು, ಸೌತೆಕಾಯಿ ಡಯೆಟ್ ಮಾಡಿ ತೆಳ್ಳಗಾಗಬಹುದು. ಈ ಸೌತೆಕಾಯಿ ಡಯೆಟ್ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.

ಸೌತೆಕಾಯಿಯ ಉಪಯೋಗ:


ಸೌತೆಕಾಯಿಯಲ್ಲಿ 95% ನೀರು ಮತ್ತು 5% ನಾರಿನಂಶವನ್ನು ಹೊಂದಿರುವುದರಿಂದ ಇದು ದೇಹವನ್ನು ಕ್ಲೆನ್ಸ್ ಮಾಡುತ್ತದೆ. ಇದು ದೇಹಕ್ಕೆ ನೀರಿನಂಶವನ್ನು ಪೂರೈಸುವುದರ ಜೊತೆಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ದೇಹವನ್ನು ತಂಪಾಗಿ ಇಡುವುದರ ಜೊತೆಗೆ ತ್ವಚೆಯ ಪೋಷಣೆಗೂ ಸಹಾಯ ಮಾಡುತ್ತದೆ. ಇದರ ಸೇವನೆ ಕಣ್ಣಿಗೂ ತುಂಬಾ ಒಳ್ಳೆಯದು.

ಸೌತೆಕಾಯಿ ಡಯೆಟ್ ವಿಧಾನ:

ಬೆಳಗ್ಗೆ:
ಒಂದು ಗೋಧಿಯ ಬ್ರೆಡ್ ಮತ್ತು ಜಾಮ್ , ಒಂದು ಬಟ್ಟಲು ಸೌತೆಕಾಯಿ ಸಲಾಡ್, ಒಂದು ಬಿಸಿ ಕಪ್ ಟೀ ಇದನ್ನು ಬೆಳಗ್ಗಿನ ತಿಂಡಿಯ ಬದಲು ಸೇವಿಸಬೇಕು.

ಮಧ್ಯಾಹ್ನ: ಬೇಯಿಸಿದ ಮೊಟ್ಟೆ ಅಥವಾ ಕಡಿಮೆ ಕೊಬ್ಬಿನ ಚಿಕ್ಕನ್, ಬ್ರೆಡ್ , ಮತ್ತು ಸೌತೆಕಾಯಿ ಸಲಾಡ್ ಅನ್ನು ಮಧ್ಯಾಹ್ನದ ಉಪಾಹಾರವಾಗಿ ಸೇವಿಸಬಹುದು.

ಸ್ನ್ಯಾಕ್ಸ್: ಸೇಬು, ಬಾಳೆಹಣ್ಣು, ಬೆಣ್ಣೆಹಣ್ಣಿನ ಜ್ಯೂಸ್ ಸೇವಿಸಬಹುದಾಗಿದೆ.

ರಾತ್ರಿ ಊಟ: ಬರೀ ಸಲಾಡ್ ಮಾತ್ರ ಸೇವಿಸಬೇಕು.

ಆಲೂಗೆಡ್ಡೆ

ಆಲೂಗೆಡ್ಡೆ ಹೆಚ್ಚಾಗಿ ಸೇವಿಸುವುದು ಒಳ್ಳೆಯದಲ್ಲ , ಅದು ದೇಹದಲ್ಲಿ ಬೊಜ್ಜು ಮತ್ತು ಗ್ಯಾಸ್ ಸಮಸ್ಯೆ ಹೆಚ್ಚು ಮಾಡುತ್ತೆ. ಆದರೆ ಅದನ್ನು ಸಿಪ್ಪೆ ಸಹಿತ ಬೇಯಿಸಿ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವುದು ನಿಮಗೆ ತಿಳಿದಿರಲಿ.

ಆಲೂಗೆಡ್ಡೆ ಸಿಪ್ಪೆಯನ್ನು ತೆಗೆಯದಿದ್ದರೆ ಅದರಲ್ಲಿರುವ ಮಣ್ಣು ಹೊಟ್ಟೆ ಸೇರುತ್ತದೆ ಎಂದು ಭಾವಿಸುವವರು ಗಮನಿಸಬೇಕಾದ ಅಂಶವೆಂದರೆ ಇನ್ನು ಮುಂದೆ ಸಿಪ್ಪೆ ತೆಗೆದು ಆಲೂಗೆಡ್ಡೆಯನ್ನು ತಿನ್ನುವ ಬದಲು, ಚೆನ್ನಾಗಿ ತೊಳೆದು ಸಿಪ್ಪೆ ಸಹಿತ ಬೇಹಿಸಿ ತಿನ್ನಿ. ಈ ರೀತಿ ತಿನ್ನುವುದರಿಂದ ಆಗುವ ಪ್ರಯೋಜನಗಳ ಕುರಿತು ತಿಳಿಯಲು ಮುಂದೆ ಓದಿ.

1.ಆಲೂಗೆಡ್ಡೆಯನ್ನು ಸಿಪ್ಪೆ ಸಹಿತ ಬೇಯಿಸಿ ತಿನ್ನವುದರಿಂದ ಇದರಲ್ಲಿರುವ ಅಧಿಕ ನಾರಿನಂಶ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಇದನ್ನು ಇತರ ತರಕಾರಿ ಜೊತೆ ತಿನ್ನವುದರಿಂದ ಬೇರೆ ತರಕಾರಿಗಳು ಕೂಡ ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ.

2. ಆಲೂಗೆಡ್ಡೆ ಸಿಪ್ಪೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ಪೊಟಾಷಿಯಂ, ತಾಮ್ರಾಂಶ, ಮ್ಯಾಗ್ನಿಷಿಯಂ ಮತ್ತು ನಾರಿನಂಶ ಅಧಿಕವಿರುತ್ತದೆ.

3. ಆಲೂಗೆಡ್ಡೆ ಸಿಪ್ಪೆಯಲ್ಲಿ 20% ಕಬ್ಬಿಣ ಮತ್ತು 8ಗ್ರಾಂ ಪ್ರೊಟೀನ್ ಇದ್ದು ಇತರ ತರಕಾರಿಗಳಿಗೆ ಹೋಲಿಸಿದರೆ ಆಲೂಗೆಡ್ಡೆ ಸಿಪ್ಪೆಯಲ್ಲಿ ಈ ಅಂಶಗಳು ಅಧಿಕವಿದೆ.

4. ಆಲೂಗೆಡ್ಡೆ ಸಿಪ್ಪೆ ಸೇವಿಸಿದರೆ ಹಾನಿಗೊಳಗಾದ ಜೀವ ಕಣಗಳನ್ನು ಮತ್ತೆ ಸರಿ ಪಡಿಸುವಂತೆ ಮಾಡುತ್ತದೆ.
ಆದರೆ ಆಲೂಗೆಡ್ಡೆ ಎಲ್ಲಾ ಅಹಾರಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಕರಿದ ಆಲೂಗೆಡ್ಡೆ ಕುರುಕುಲು ತಿಂಡಿ, ಇತರ ಕೊಬ್ಬಿನ ಪದಾರ್ಥಗಳ ಜೊತೆ ಸೇವಿಸುವುದು ಇವೆಲ್ಲವೂ ಹೃದಯ ಸಂಬಂಧಿ ಕಾಯಿಲೆಯನ್ನು ತರುತ್ತದೆ, ಆಲೂಗೆಡ್ಡೆಯನ್ನು ಸಿಪ್ಪೆ ಸಹಿತ ಬೇರೆ ತರೆಕಾರಿಗಳ ಜೊತೆ ಹಾಕಿ ಬೇಯಿಸಿ ತಿನ್ನವುದು ಆರೋಗ್ಯಕ್ಕೆ ಒಳ್ಳೆಯದು.

ಕ್ಯಾರೆಟ್

ಡಯಟ್ ಎಂದರೆ ಕೇವಲ ರುಚಿಯಿಲ್ಲದ ಆಹಾರದ ಸೇವನೆ ಎಂದು ಹಲವರು ತಪ್ಪು ತಿಳಿಯುತ್ತಾರೆ. ಆದರೆ ರುಚಿಯೊಂದಿಗೆ ತೂಕ ಇಳಿಸಿಕೊಳ್ಳುವ ವಿಧಾನವೊಂದು ಇಲ್ಲಿದೆ. ಕ್ಯಾರೆಟ್ ಡಯಟ್ ಪಾಲಿಸಿದರೆ ದೇಹದಲ್ಲಿನ ಅಧಿಕ ಬೊಜ್ಜನ್ನು ಕರಗಿಸಿಕೊಳ್ಳಬಹುದು ಎಂದು ತಿಳಿದುಬಂದಿದೆ.


ಕ್ಯಾರೆಟ್ ಹಸಿಯಾಗಿ ಬೇಕಾದರೂ ತಿನ್ನಬಹುದು, ಇಲ್ಲವೆಂದರೆ ಸೂಪ್, ಸಲಾಡ್ ಮತ್ತು ಜ್ಯೂಸ್ ನಂತೆಯೂ ಸೇವಿಸಬಹುದು. ಕ್ಯಾರೆಟ್ ನಲ್ಲಿನ ಅಧಿಕ ವಿಟಮಿನ್ ಕಣ್ಣಿನ ದೃಷ್ಟಿಯನ್ನೂ ಚುರುಕುಗೊಳಿಸುತ್ತೆ.


ಕ್ಯಾರೆಟ್ ಡಯಟ್- ನೈಸರ್ಗಿಕವಾಗಿ ತೂಕ ಇಳಿಸುವ ಮಾರ್ಗ


1. ಬೆಳಗ್ಗೆ: ಬ್ರೇಕ್ ಫಾಸ್ಟ್ ಗೆ ಕ್ಯಾರೆಟ್ ಜ್ಯೂಸ್ ಅಥವಾ ಮಿಲ್ಕ್ ಶೇಕ್ ಸೇವಿಸಬಹುದು. ಜೊತೆಗೆ ಒಂದು ಮೊಟ್ಟೆಯನ್ನೂ ಸೇವಿಸಬಹುದು.


2. ಮಧ್ಯಾಹ್ನ: ಟೋಸ್ಟೆಡ್ ಬ್ರೆಡ್ ಜೊತೆ ತುರಿದ ಕ್ಯಾರೆಟ್, ಟೊಮೆಟೊ, ಉಪ್ಪು ಮತ್ತು ಮೆಣಸನ್ನು ಬೆರೆಸಿ ತಿನ್ನಬೇಕು.


3. ರಾತ್ರಿ: ರಾತ್ರಿ ಊಟಕ್ಕೆ ಕ್ಯಾರೆಟ್ ಮತ್ತು ಬೇಳೆ ಬೆರೆಸಿ ತಯಾರಿಸಿದ ಸೂಪನ್ನು ಸೇವಿಸಬೇಕು ಮತ್ತು ಒಂದು ಕಪ್ ಕೆಂಪಕ್ಕಿ ಅನ್ನವನ್ನು ಮೊಸರಿನ ಜೊತೆ ಸೇವಿಸಿದರೆ ಹೊಟ್ಟೆ ತುಂಬಿದಂತಾಗುತ್ತದೆ.


ಕ್ಯಾರೆಟ್ ಬಗ್ಗೆ ಇನ್ನೂ ತಿಳಿಯಿರಿ:


1. ಕ್ಯಾರೆಟ್ ನಲ್ಲಿನ ಕಾರೊಟಿನ್ ಅಂಶ ದೇಹವನ್ನು ಶುದ್ಧವಿರಿಸಿ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.


2. ಕ್ಯಾರೆಟ್ ನಲ್ಲಿ 10 % ಕಾರ್ಬೊಹೈಡ್ರೇಟ್ ಇದೆ. ಅಷ್ಟೇ ಅಲ್ಲ, ಇದರಲ್ಲಿ ವಿಟಮಿನ್ ಎ, ಡಿ, ಇ, ಕೆ, ಪಿಪಿ, ಆಸ್ಕಾರ್ಬಿಕ್ ಆಸಿಡ್, ಸ್ಟೆರಾಲ್ ಮತ್ತು ಲೆಸಿತಿನ್ ಅಂಶವಿದೆ. ಇವೆಲ್ಲವೂ ಆರೋಗ್ಯಕ್ಕೆ ಹಿತವನ್ನುಂಟುಮಾಡುತ್ತದೆ.


3. ಕ್ಯಾರೆಟ್ ತಿನ್ನುವುದರಿಂದ ಹೃದಯದ ಸಮಸ್ಯೆಗಳನ್ನು ದೂರವಿಡಬಹುದು. ಮಂದ ದೃಷ್ಟಿ, ಕ್ಯಾನ್ಸರ್ ನಿವಾರಣೆಗು ಇದು ಸಹಕಾರಿ. ಕ್ಯಾರೆಟ್ ನಲ್ಲಿ ಐಯೋಡಿನ್ ಮತ್ತು ಫೈಬರ್ ಇರುವುದರಿಂದ ತೂಕವನ್ನು ಇಳಿಸಿಕೊಳ್ಳಬಹುದು.


ಮಧ್ಯಾಹ್ನ ಮತ್ತು ರಾತ್ರಿ ಲಘು ಊಟದ ನಂತರ ಕ್ಯಾರೆಟ್ ತಿಂದರೆ 3-4 ಕೆ.ಜಿ ತೂಕ ಇಳಿಸಿಕೊಳ್ಳುವುದು ಸಾಧ್ಯವಿದೆ.

ಸೋರೆಕಾಯಿ

ಸೋರೆಕಾಯಿ ದೇಹದ ಆರೋಗ್ಯ ಹೆಚ್ಚಿಸುವುದಷ್ಟೆ ಅಲ್ಲ, ತೂಕ ಕಡಿಮೆ ಮಾಡುವುದರಲ್ಲಿ ತುಂಬಾ ಪರಿಣಾಮಕಾರಿಯಾದ ತರಕಾರಿ. ಇದು ದೇಹದ ತೂಕ ಇಳಿಸುವಲ್ಲಿ ಹೇಗೆ ಸಹಾಯಕವಾಗಿದೆ ಎಂದು ನೋಡೋಣ ಬನ್ನಿ.


1. ಸೋರೆಕಾಯಿಯಲ್ಲಿ ನಾರಿನಂಶ ಅಧಿಕವಿರುವುದರಿಂದ ಹೊಟ್ಟೆ ತುಂಬುವುದು ಮತ್ತು ಜೀರ್ಣಕ್ರಿಯೆಗೆ ಸಹಾಯವಾಗಿದೆ.
2. ಬೆಳಗ್ಗೆ ತಿಂಡಿಯನ್ನು ಹೊಟ್ಟೆ ತುಂಬಾ ತಿನ್ನಬಾರದು.
3. ಕುರುಕಲು ತಿಂಡಿ ತಿನ್ನುವ ಬದಲು ಒಂದು ಲೋಟ ಸೋರೆಕಾಯಿ ಜ್ಯೂಸ್ ಮತ್ತು ಸ್ವಲ್ಪ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ಮಧ್ಯೆದಲ್ಲಿ ಹೊಟ್ಟೆ ಹಸಿದಾಗ ಎಣ್ಣೆ ತಿಂಡಿ ಬದಲು ಹಣ್ಣುಗಳನ್ನು ತಿನ್ನುವ ಅಭ್ಯಾಸ ಒಳ್ಳೆಯದು.
4. ಬರೀ ಸೋರೆಕಾಯಿ ಜ್ಯೂಸ್ ಕುಡಿದರಷ್ಟೆ ದೇಹದ ತೂಕ ಕಡಿಮೆಯಾಗುವುದಿಲ್ಲ. ಇದರ ಜೊತೆ ಕಟ್ಟುನಿಟ್ಟಿನ ವ್ಯಾಯಾಮ ಮಾಡಬೇಕು.
ಬರಿ ತೂಕ ಇಳಿಸುವಲ್ಲಿ ಮಾತ್ರವಲ್ಲ ಈ ಕೆಳಗಿನ ಗುಣಗಳಿಂದ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.


1. ಸೋರೆಕಾಯಿಯನ್ನು ಬೇಯಿಸಿ ಜ್ಯೂಸ್ ಮಾಡಿ ಕುಡಿದರೆ ದೇಹ ತಂಪಾಗುವುದು.


2. ಮೂತ್ರ ಉರಿ ಸಮಸ್ಯೆ ಇರುವವರು ಸೋರೆಕಾಯಿ ಜ್ಯೂಸ್ ಗೆ ಸ್ವಲ್ಪ ನಿಂಬೆರಸ ಸೇರಿಸಿ ದಿನಕ್ಕೆ ಒಂದು ಬಾರಿ ಕುಡಿದರೆ ತುಂಬಾ ಒಳ್ಳೆಯದು.


3. ಡಯಾರಿಯಾ ಉಂಟಾಗಿದ್ದರೆ ಅಥವಾ ಅಧಿಕ ಕರಿದ ಪದಾರ್ಥಗಳನ್ನು ತಿಂದಾಗ ಸೋರೆಕಾಯಿ ಜ್ಯೂಸ್ ಗೆ ಸ್ವಲ್ಪ ಉಪ್ಪು ಹಾಕಿ ಕುಡಿಯುವುದು ಒಳ್ಳೆಯದು. ಮಧುಮೇಹಿಗಳು ಈ ಜ್ಯೂಸ್  ಕುಡಿಯುವುದು ಒಳ್ಳೆಯದು.


4. ಬೇಸಿಗೆಯಲ್ಲಿ ವಿಪರೀತ ಬೆವರು ಬರುವವರು ಈ ಜ್ಯೂಸ್ ಕುಡಿದರೆ ಒಳ್ಳೆಯದು.

ನೀವು ಅರೋಗ್ಯವಾಗಿ ಹೆಚ್ಚು ಕಾಲ ಬದುಕ ಬೇಕಾದರೆ!

ನೀವು ಅರೋಗ್ಯವಾಗಿ ಹೆಚ್ಚು ಕಾಲ ಬದುಕ ಬೇಕಾದರೆ ಮಾಡಾಬೇಕಾದ ಕೆಲವು ಕಾರ್ಯಗಳು.

೧. ನೀವು ಹದಿನೆಂಟನೇ ವಯಸ್ಸಿನಲ್ಲಿ ಎಷ್ಟು ತೂಕವಿದ್ದಿರೋ ಈಗಲೂ ಹೆಚ್ಚು ಕಡಿಮೇ ಅದೇ ತೂಕ ದಲ್ಲಿರುವಂತೆ ನೊಡಿಕೊಳ್ಳಿ. ಮುಖ್ಯವಾಗಿ ನಿಮ್ಮ ಈಗಿನ ಸೊಂಟದ ಸುತ್ತಳತೆ ನಿಮ್ಮ ಹದಿನೆಂಟನೇ ವಯಸ್ಸಿನಲ್ಲಿ ಎಷ್ಟಿತ್ತೊ ಅಷ್ಟೇ ಇರುವಂತೆ ನೋಡಿಕೊಳ್ಳಿ. ಇದರಿಂದ ಹೃದಯದ ಖಾಯಿಲೆಗಳು ನಿಮ್ಮನ್ನು ಕಾಡುವುದಿಲ್ಲ.


೨. ದಿನದಲ್ಲಿನ ಒಂದು ಹೊತ್ತು ಊಟ ಕಡಿಮೆ ಮಾಡಿ. ಓಂದು ಹೊತ್ತು ಊಟ ಕಡಿಮೆ ಮಾಡಲಾಗದಿದ್ದರೂ ಮಾಡುವ ಪ್ರತಿಯೊಂದು ಊಟವನ್ನೂ ಹೊಟ್ಟೆ ಬಿರಿಯುವಂತೆ ತಿನ್ನದೇ ಇನ್ನು ಸ್ವಲ್ಪ ತಿನ್ನಬಹುದು ಎಂಬಲ್ಲಿಗೆ ಊಟ ಮುಗಿಸದರೆ ಒಳ್ಳ್ತೆಯದು. ಹೆಚ್ಚು ಊಟಮಾಡುವುದರಿಂದ ನಮ್ಮ ದೇಹದ ಎಲ್ಲ ಕೊಶಗಳಿಗು ಹೆಚ್ಚಿನ ಒತ್ತಡ ತರುತ್ತದೆ , ಈ ಒತ್ತಡವೇ ಹಲವಾರು ಖಾಯಿಲೆಗಳ ತವರೂರು.


೩. ಹೇರಳವಾಗಿ ನೀರು ಕುಡಿಯಬೇಕು. ಮನುಷ್ಯನ ದೇಹ ಶೇಕಡ ೭೦ ಕ್ಕಿಂತ ಹೆಚ್ಚು ನೀರಿನಿಂದ ಮಾಡಲ್ಪಟ್ಟಿದೆ. ಹಾಗಾಗಿ ನೀರು ನಮ್ಮ ಆಹಾರದ ಮುಖ್ಯ ಭಾಗವಾಗಿರಬೇಕು. ಹಾಗೆಂದು ನೀವು ಮಾರುಕಟ್ಟೆ ಯಲ್ಲಿ ಸಿಗುವ ತರಾವರಿ ಜ್ಯೂಸ್ ಕುಡಿದರೆ ಅದು ನೀರು ಕುಡಿದಂತಲ್ಲ. ನಮ್ಮ ಸಂಪ್ರದಾಯದಂತೆ ತಾಮ್ರದ ಚಂಬಿನಲ್ಲಿ ಶೇಖರಿಸಿಟ್ಟ ನೀರು ಕುಡಿಯುವುದು ನಮ್ಮ ಲಿವರಿನ ಅರೊಗ್ಯಕ್ಕೆ ಉತ್ತಮ. ನೀರು ನಮ್ಮ ದೇಹದ ಕಲ್ಮಷಗಳನ್ನು ದೇಹದಿಂದ ಹೊರಹಾಕಿಸುತ್ತದೆ, ಪ್ರತಿಯೊಂದು ಕೋಶಕ್ಕೂ ಆಹಾರವನ್ನು ತಲುಪಿಸುತ್ತದೆ.


೪. ನಮ್ಮ ಅಹಾರದ ಶೇಕಡ ೭೦ ಭಾಗ ತರಕಾರಿ ಮತ್ತು ಹಣ್ಣಿನಿಂದ ಕೂಡಿರಬೇಕು. ಸಸ್ಯಾಹಾರ ನಮ್ಮ ದೇಹಕ್ಕೆ ಅತ್ತ್ಯುತ್ತಮ. ಜೀವದಿಂದ ತುಂಬಿರುವ ತರಕಾರಿ ಮತ್ತು ಹಣ್ಣು ಗಳನ್ನು ತಿನ್ನುವುದು ನಿರ್ಜೀವವಾದ ಮಾಂಸಾಹಾರ ತಿನ್ನುವುದಕ್ಕಿಂತ ಎಷ್ಟೋ ಮೇಲು.


೫. ದಿನದ ಮುಂಜಾನೆ ಮತ್ತು ಮುಸ್ಸಂಜೆಯ ವೇಳೆ ಮೂವತ್ತು ನಿಮಿಷಗಳಕಾಲ ಹೊರಗಡೆ ಶುದ್ದವಾದ ಗಾಳಿ ಸಿಗುವಕಡೆ ಓಡಾಡುವುದು ನಮ್ಮ ಆರೊಗ್ಯಕ್ಕೆ ಉತ್ತಮ. ಈ ಸಮಯಗಳಲ್ಲಿ ಹೊರಗಡೆಯಿರುವುದರಿಂದ ನಮ್ಮ ದೇಹದ ಜೈವಿಕ ಗಡಿಯಾರದ ಚಾಲನೆ ಉತ್ತಮಗೊಳ್ಳುತ್ತದೆ. ಹಾಗೆಯೆ ನಮ್ಮ ಪಾದವು ಪಾದರಕ್ಷೆಗಳಿಲ್ಲ್ಸದೇ ಹುಲ್ಲಿನ ಮೇಲಾಗಲಿ ಮಣ್ಣಿನ ಮೇಲಾಗಲಿ ನಡೆದಾಡಿದರೆ ನಮ್ಮಲ್ಲಿನ ನೆಗೆಟಿವ್ ಶಕ್ತಿಯನ್ನು ಭೂಮಿ ಹೀರಿಕೊಳ್ಳುತ್ತದೆ.


೬. ನಿಮ್ಮ ಮನಸ್ಸು ಸದಾ ನೀವು ಉಸಿರಾಡುವುದನ್ನು ಗಮನಿಸುತ್ತಿರಲಿ. ಸಾಮಾನ್ಯ ನಾವ್ಯರೂ ಉಸಿರಾಡುವುದನ್ನು ಗಮನಿಸುವುದೇ ಇಲ್ಲಾ. ನಾವು ಅನ್ನ ನೀರು ಇಲ್ಲದೇ ದಿನಗಟ್ಟಲೇ ಬದುಕಿರಬಹುದು ಆದರೇ ಉಸಿರಾಟವಿಲ್ಲದೇ ಕೆಲವು ಗಂಟೆಗಳ ಕಾಲ ಕೂಡಾ ಬದುಕಿರಲಾರೆವು. ಇಷ್ಟೋಂದು ಮುಖ್ಯವಾಗಿರು ಉಸಿರಾಟವನ್ನು ನಾವ್ಯಾರೂ ಗಮನಿಸುವುದೇ ಇಲ್ಲಾ, ಹಾಗಾಗಿ, ನಾವು ಉಸಿರಾಡುವ ರೀತಿ ಅನಿಯಮಿತವಾಗಿರುತ್ತದೆ. ನಾವು ಯಾವಾಗಲೂ ನಿಯಮಿತವಾಗಿ ಧೀರ್ಘವಾಗಿ ಮತ್ತು ಸುಲಲಿತವಾಗಿ ಉಸಿರಾಡುವುದನ್ನು ಕಲಿಯಬೇಕು. ನಮ್ಮ ಮನಸ್ಸನ್ನು ಉಸಿರಾಟದ ಮೇಲೆ ಕೇಂದ್ರೀಕರಿಸುವುದರಿಂದ ಮಾತ್ರ ನಮ್ಮ ಉಸಿರಾಟವನ್ನು ನಿಯಮಿತ ಗೊಳಿಸು ವುದು ಸಾಧ್ಯ. ಯೊಗದಲ್ಲಿ ಹೇಳುವ ಪ್ರಾಣಾಯಾಮ ಈ ಅಂಶವನ್ನೇ ಒತ್ತಿ ಹೇಳುತ್ತದೆ. ಹಾಗೆ ಯೋಗದ ಅತ್ತ್ಯುತ್ತಮ ಸ್ಟಿತಿಯಾದ ಸಮಾಧಿ ಸ್ಟಿತಿ ಸೇರಲು, ನಮ್ಮ ಉಸಿರಾಟ ಕ್ರಿಯೆಯನ್ನು ನಿಯಮಿತ ಗೊಳಿಸುವ ಮತ್ತು ನಮ್ಮ ಮನಸ್ಸ್ಸನ್ನು ಉಸಿರಾಟದಲ್ಲಿ ಕೇಂದ್ರೀಕರಿಸುವುದು ಮೊದಲನೇ ಹೆಜ್ಜೆ.


೭. ದಿನಕ್ಕೆ ೭ರಿಂದ ೮ ಗಂಟೆ ನಿದ್ದೆ ಮಾಡುವುದು ನಮ್ಮ ಆರೋಗ್ಯಕ್ಕೆ ಅತ್ಯವಶ್ಯಕ.


೮. ಧೂಮಪಾನ ಮತ್ತು ಅಲ್ಕೋಹಾಲ್ ಗಳಿಂದ ದೂರವಿರಬೇಕು.